73ನೇ ಗಣರಾಜ್ಯೋತ್ಸವ ದಿನಾಚರಣೆ ಸರಳವಾಗಿ ಆಚರಿಸಲಾಯಿತು 26/01/2022

ಪಟ್ಟಣದ ಗೋಣಿಕೊಪ್ಪ ರಸ್ತೆಯ ಜಿಜೆಸಿಪಿ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು ತಹಸೀಲ್ದಾರ್ ಕೆ.ಚಂದ್ರಮೌಳಿ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕೊರೋನಾ ಸೋಂಕು ಸಂದರ್ಭದಲ್ಲಿ ಹಗಲಿರುಳೆನ್ನದೆ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ನಾವು ಗೌರವಿಸಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೋಂಕು ಹರಡದಂತೆ ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರದಾಗಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದ ಕೀರ್ತಿ ಭಾರತ ದೇಶದ್ದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸಿಡಿಪಿಒ ಕುಮಾರ್ ರವರು ಮಾತನಾಡಿ ಸಂವಿಧಾನ ಜಾರಿಗೆ ತಂದ ದಿನವನ್ನು ಗಣರಾಜ್ಯದ ಹಬ್ಬವೆಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ, ಭಾರತ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಎಲ್ಲಾ ರೀತಿಯ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯವನ್ನು ಸಂವಿಧಾನಾತ್ಮಕವಾಗಿ ನೀಡಿದ ದಿನ ಗಣರಾಜ್ಯ ದಿನವಾಗಿದೆ, ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಇರುವ ನಮ್ಮ ದೇಶ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಸಹ ಹೊಂದಿರುವುದು ನಮ್ಮ ಹೆಮ್ಮೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಯಾವುದೇ ಶತ್ರುಗಳಿಗೆ ಅಂಜದ ಭಾರತೀಯರು ಕಳೆದ 2 ಎರಡು ವರ್ಷಗಳಿಂದ ಕೋವಿಡ್ ನಂತಹ ರೋಗಕ್ಕೆ ಹೆದರುವ ಮೂಲಕ ಸರಳವಾಗಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಿದ್ದೇವೆ, ದೇಶದಲ್ಲಿ ಜನಸಂಖ್ಯಾ ಸ್ಫೋಟದ ಆತಂಕದ ನಡುವೆಯೂ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಕನಸಿನಂತೆ ಹೆಣ್ಣುಮಕ್ಕಳು ಗಾಜಿನ ಮನೆಯಿಂದ ಹೊರ ಬಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ, ದೇಶದ ಜನರಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವುದು ಕಷ್ಟವಾಗಿದ್ದರೂ ಸಮರ್ಥವಾಗಿ ಆಡಳಿತ ಮಾಡಲಾಗುತ್ತಿದೆ ಎಂದರು.

ಇದೇ ವೇಳೆ ಕೋವಿಡ್ ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್ ವಿತರಿಸಲಾಯಿತು, ಕೊರೋನಾ ವಾರಿಯರ್ಸ್ ಗಳಾಗಿ ದುಡಿದ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ಸದಸ್ಯ ನಿರಂಜನ್, ನಾಮ ನಿರ್ದೇಶನ ಸದಸ್ಯ ಶಿವರಾಮೆಗೌಡ, ಎಪಿಎಂಸಿ ಅಧ್ಯಕ್ಷ ಶಂಕರಪ್ಪ, ಜಿ.ಪಂ ಎಇಇ ಮಂಜುನಾಥ್, ಇನ್ಸ್ ಪೆಕ್ಟರ್ ಗಳಾದ ಪಿ.ಜಗದೀಶ್, ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಟಿ ತಿಮ್ಮೆಗೌಡ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಎಡಿಎಲ್ ಆರ್ ಚಿಕ್ಕಣ್ಣ, ಸರ್ವೆಯರ್ ಎಂ.ಕೆ ಪ್ರಕಾಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್ ಕಾಂತರಾಜು, ಉಪನ್ಯಾಸಕ ಪುಟ್ಟಮಾದಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ತಾಲ್ಲೂಕು ಆಡಳಿತ ಕಚೇರಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆರಕ್ಷಕ ಹಾಗೂ ಶಿಕ್ಷಣ ಇಲಾಖೆಯವರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top