
ತಾಲ್ಲೂಕಿನಾದ್ಯಂತ ಸಾರ್ವಜನಿಕ ಸಮಸ್ಯೆಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೂದಿತಿಟ್ಟು ಸಮೀಪದ ಲಕ್ಷ್ಮೀಪುರ ಹಾಡಿಯ ಪರಿಶಿಷ್ಟ ಪಂಗಡ ಕಾಲೊನಿಯಲ್ಲಿ 20 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲ್ಲೂಕಿನಲ್ಲಿ ಈ ಹಿಂದೆ ಅಧಿಕಾರ ನಡೆಸಿದವರು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸದ ಹಿನ್ನೆಲೆ ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗಿತ್ತು, ಚುನಾವಣಾ ಸಂದರ್ಭ ಮಾತ್ರ ನನ್ನ ವಿರುದ್ಧ ಅಪಪ್ರಚಾರ ಮಾಡಿ ಜಯಗಳಿಸಿ ಸುಮ್ಮನಾಗುತ್ತಿದ್ದರು, ಎರಡು ಬಾರಿ ಸೋಲಿಸಿದರು ಸಹ ಮೂರನೇ ಬಾರಿಗೆ ನನ್ನನ್ನು ತಾಲ್ಲೂಕಿನ ಜನತೆ ಶಾಸಕನಾಗಿ ಆಯ್ಕೆ ಮಾಡಿದರು ಅವರ ಋಣ ನನ್ನ ಮೇಲಿದ್ದು ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೂ ಪಕ್ಷಾತೀತವಾಗಿ ಹಂತಹಂತವಾಗಿ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ, ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂಬರುವ ಚುನಾವಣೆಯಲ್ಲಿಯೂ ಬೆಂಬಲಿಸಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೊಸೂರು ಕೆರೆಮಾಳ ಗ್ರಾಮಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿದ ಜನಪ್ರತಿನಿಧಿಗಳ ನಿರ್ಲಕ್ಷ ತನದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ, ಈ ಭಾಗದ ಜನರು ಮೂಲಭೂತ ಸೌಕರ್ಯ ವಂಚಿತರಾಗಿ ಜೀವನವೇ ದುಸ್ತರವಾಗಿತ್ತು, ಈ ಭಾಗದ ಪಂಚಾಯ್ತಿಯ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಮತ್ತು ಮುಖಂಡರು ನನಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಅಭಿವದ್ಧಿಗೆ ಆದ್ಯತೆ ನೀಡಿ ಪ್ರಸ್ತುತ 20 ಲಕ್ಷ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು.
ಇದೇ ವೇಳೆ ಕಿರಂಗೂರು ನವಿಲೂರು ಹಾಗೂ ಹುಣಸವಾಡಿ ಗ್ರಾಮಗಳಲ್ಲಿ 67 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೊನಿಯ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಚೌತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸದಸ್ಯರಾದ ಲಕ್ಷ್ಮಣ್ ಪಟೇಲ್, ಗೌರಮ್ಮ, ರಾಮೇಗೌಡ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಒ ವೈ.ಕೆ ತಿಮ್ಮೇಗೌಡ, ಮುಖಂಡರಾದ ಪ್ರಭಾಕರ್, ರಾಮೇಗೌಡ, ಗಣೇಶ್, ಸಂಜು, ವಿಜಯ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಗ್ರಾಮದ ಮುಖಂಡರು ಹಾಜರಿದ್ದರು.