
ಪಿರಿಯಾಪಟ್ಟಣ: ಸಂಸದನಾಗಿ ಆಯ್ಕೆಯಾದಾಗಿನಿಂದ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ತಾಲ್ಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಯೂರು ಗ್ರಾಮದಲ್ಲಿ 40 ಲಕ್ಷ ವೆಚ್ಚ ಹಾಗೂ ಮಾಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಹೊಸಹಳ್ಳಿ ಮಣಿಪುರ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಹಳ್ಳಿಗಳಲ್ಲಿನ ಮೂಲಸೌಕರ್ಯ ಬಗೆಹರಿಸಲು ಕೇಂದ್ರ ಸರ್ಕಾರ ವತಿಯಿಂದ ಗ್ರಾ.ಪಂ ಗಳ ಮೂಲಕ ಸಾಕಷ್ಟು ಅನುದಾನ ದೊರೆಯುತ್ತಿದ್ದು ಅವುಗಳ ಸದ್ಬಳಕೆ ಆಗಬೇಕಿದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆಯನ್ನು ಕ್ರಿಯಾಶೀಲವಾಗಿ ಜಾರಿಗೊಳಿಸಿದರೆ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರ ಕಾರ್ಯ ಶ್ಲಾಘನೀಯ, ಸಂಸದನಾಗಿ ಆಯ್ಕೆಯಾದಾಗಿನಿಂದ ಜನಪರ ಕಾಳಜಿ ಇಟ್ಟು ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಹೆಚ್ಚು ಒತ್ತು ನೀಡಿದ್ದೇನೆ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಿಕ್ಕ ಸಂದರ್ಭ ಅಭಿವೃದ್ಧಿಯಷ್ಟೇ ಮೂಲಮಂತ್ರ, ಶಾಸಕ ಕೆ.ಮಹದೇವ್ ಅವರು ಸಹ ತಾಲ್ಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಗೂ ಹಂತಹಂತವಾಗಿ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಸಹಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ, ವಿರೋಧಿಗಳ ಟೀಕೆಗಳಿಗೆ ಅಭಿವೃದ್ಧಿಯ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದರು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಮುಖಂಡ ಆರ್.ಎಲ್ ಮಣಿ, ಆವರ್ತಿ ಹಾಗೂ ಮಾಕೋಡು ಗ್ರಾಮ ಪಂಚಾಯಿತಿ ಸದಸ್ಯರು, ಬಿಇಒ ವೈ.ಕೆ ತಿಮ್ಮೆಗೌಡ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪಿಡಬ್ಲ್ಯುಡಿ ಎಇ ದಿನೇಶ್, ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.