
ಪಿರಿಯಾಪಟ್ಟಣ: ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ಪ್ರಧಾನಿ ನರೇಂದ್ರ ಮೋದಿಯವರಿಂದ ನನಸಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.ಪಟ್ಟಣದ ಜಿಜೆಸಿಪಿ ಕಾಲೇಜು ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತಾಲ್ಲೂಕಿನ 32 ಗ್ರಾ.ಪಂ ಗಳಿಗೆ ಕಸ ವಿಲೇವಾರಿ ವಾಹನ ವಿತರಿಸಿ ಅವರು ಮಾತನಾಡಿದರು, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಪ್ರತಿಯೊಬ್ಬ ಜನರು ಬ್ಯಾಂಕ್ ಖಾತೆ ಹೊಂದುವ ಸಲುವಾಗಿ ಜನಧನ್ ಖಾತೆ ಯೋಜನೆ ಪ್ರಾರಂಭ, ಉಜ್ವಲ ಯೋಜನೆ ಜಾರಿ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಯಿತು, ಗ್ರಾ.ಪಂ ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಾಗು ಕಸ ವಿಲೇವಾರಿ ವಾಹನ ನೀಡುವ ಬಗ್ಗೆ ಇಷ್ಟು ವರ್ಷವಾದರೂ ಯಾರೂ ಯೋಚಿಸಿರದ ನೂತನ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ ಜಾರಿಗೊಳಿಸಲಾಗಿದೆ, ಗ್ರಾ.ಪಂ ಗಳಿಗೆ ನೇರ ಅನುದಾನ ನೀಡುವ ಮೂಲಕ ಗ್ರಾ.ಪಂ ಸದಸ್ಯರಿಗೆ ತಾ.ಪಂ ಹಾಗೂ ಜಿ.ಪಂ ಸದಸ್ಯರಿಗಿಂತ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ, ನರೇಗಾ ಯೋಜನೆಯನ್ನು ಕ್ರಿಯಾಶೀಲವಾಗಿ ಜಾರಿಗೊಳಿಸುವ ಮೂಲಕ ಕೆರೆ ಕಟ್ಟೆ ಹಾಗೂ ಸ್ಮಶಾನ ಅಭಿವೃದ್ಧಿ ಸೇರಿದಂತೆ ರಸ್ತೆಗಳ ನಿರ್ಮಾಣವಾಗುತ್ತಿರುವುದು ಕೇಂದ್ರ ಪುರಸ್ಕೃತ ಯೋಜನೆಯಡಿಯಾಗಿದೆ, ಶಾಸಕ ಕೆ.ಮಹದೇವ್ ಅವರ ಜೊತೆಗೂಡಿ ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿ ಸೇರಿದಂತೆ ಶಕ್ತಿ ದೇವತೆ ಶ್ರೀಮಸಣೀಕಮ್ಮರವರ ದೇವಾಲಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ವಿರೋಧ ಪಕ್ಷದ ಶಾಸಕನಾಗಿದ್ದರೂ ಸಂಸದ ಪ್ರತಾಪ್ ಸಿಂಹ ಹಾಗೂ ಉಸ್ತುವಾರಿ ಸಚಿವರ ಸಹಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ, ನಗರ ವ್ಯಾಪ್ತಿಯಂತೆ ಗ್ರಾಮಾಂತರ ಪ್ರದೇಶಗಳಿಗು ಮೂಲಭೂತ ಸೌಕರ್ಯ ಒದಗಿಸುವ ಬದ್ಧತೆ ಹಿಂದೆ ಆಡಳಿತ ನಡೆಸಿದವರಿಗೆ ಇಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದ್ದು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಗ್ರಾ.ಪಂ ಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಶ್ಲಾಘನೀಯ ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ 1.75 ಕೋಟಿ ವೆಚ್ಚದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 5.35 ಲಕ್ಷ ಹಣದ 32 ಹೊಸ ವಾಹನ ಖರೀದಿಸಿ ಸ್ವಚ್ಚತೆಗೆ ಆದ್ಯತೆ ನೀಡಿದ್ದು ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಸ್ವಚ್ಛತೆಗೆ ಒತ್ತು ನೀಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಸದಸ್ಯ ನಿರಂಜನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಗೌಡ, ಐಟಿಸಿ ಕಾರ್ಯಕ್ರಮ ಸಂಯೋಜಕ ಮನೋಜ್, ಮೈಕ್ಯಾಪ್ ಕಾರ್ಯಕ್ರಮ ಸಮನ್ವಯಾಧಿಕಾರಿ ಶಂಕರ್, ಜಿ.ಪಂ ಸಂಚಾಲಕ ಪ್ರದೀಪ್, ತಾ.ಪಂ ಸಹಾಯಕ ನಿರ್ದೇಶಕರಾದ ಜಿ.ಸಿ ಮಹದೇವ್, ಕರುಣಾಕರ್, ಕಚೇರಿ ವ್ಯವಸ್ಥಾಪಕರಾದ ಗಜೇಂದ್ರಕುಮಾರ್, ಚಂದ್ರಕಾಂತ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕಿನ ಎಲ್ಲಾ ಗ್ರಾ.ಪಂ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಜರಿದ್ದರು.