ಮೈತ್ರಿ ಸರ್ಕಾರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತ ಕಾರ್ಯವೈಖರಿ ವಿರುದ್ಧ ತಿರುಗಿ ಬಿದ್ದಿರುವ ಆಡಳಿತ ಪಕ್ಷದ ಶಾಸಕರುಗಳು ಸಾಲು ಸಾಲಾಗಿ ರಾಜೀನಾಮೆ ನೀಡಿ ಮುಂಬೈ ಸೇರಿದ ಹಿನ್ನೆಲೆ ತಮ್ಮ ಪಕ್ಷಗಳ ಶಾಸಕರುಗಳು ಮುಂದೆ ರಾಜೀನಾಮೆ ನೀಡದಂತೆ ತಡೆದು ಇಟ್ಟುಕೊಳ್ಳುವಲ್ಲಿ ಕಾರ್ಯಪ್ರವೃತ್ತರಾದ ಆಡಳಿತ ಪಕ್ಷದ ವರಿಷ್ಠರು ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗಿ ತಮ್ಮ ಶಾಸಕರುಗಳು ಅಲ್ಲಿಂದ ಎಲ್ಲೂ ಹೊರಡದಂತೆ ಕಾದಿದ್ದರೂ ಅದರಂತೆ ವಿಪಕ್ಷ ಸದಸ್ಯರುಗಳೂ ಸಹ ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗಿದ್ದರು, ಇದೇ ಸಮಯ ವಿಧಾನಮಂಡಲದ ಚಳಿಗಾಲ ಅಧಿವೇಶನ ಪ್ರಾರಂಭವಾದ ಹಿನ್ನೆಲೆ ಶಾಸಕರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದರು.
ವಿಧಾನಸಭೆ ಅಧಿವೇಶನ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರ ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗದ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಶುಕ್ರವಾರ ತಡರಾತ್ರಿ ಅಧಿವೇಶನ ಮುಗಿಯುತ್ತಿದ್ದಂತೆ ಕ್ಷೇತ್ರಕ್ಕೆ ವಾಪಸ್ಸಾಗಿ ಶನಿವಾರ ಮತ್ತು ಭಾನುವಾರಗಳಂದು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ, ಕಳೆದ ಶನಿವಾರ ಭಾನುವಾರಗಳಂದು ಸಹ ಕ್ಷೇತ್ರಕ್ಕೆ ಆಗಮಿಸಿದ ಶಾಸಕರು ಪಟ್ಟಣದಲ್ಲಿ ನಡೆಯುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ್ದರು, ಈ ವಾರವೂ ಸಹ ಕ್ಷೇತ್ರದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ರಜಾದಿನ ಭಾನುವಾರ ಸಹ ಸರ್ಕಾರಿ ಅಧಿಕಾರಿಗಳನ್ನು ತಮ್ಮೊಟ್ಟಿಗೆ ಕರೆದೊಯ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಸಮಸ್ಯೆ ಪರಿಹಾರದ ಭರವಸೆ ನೀಡುತ್ತಿರುವುದಕ್ಕೆ ಕ್ಷೇತ್ರದ ಮತದಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಪ್ರವಾಸ: ಶನಿವಾರ ಪಟ್ಟಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವಸತಿ ಗೃಹ ಉದ್ಘಾಟನೆ, ತಾತನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಗುದ್ದಲಿ ಪೂಜೆ, ಸತ್ಯಗಾಲ ಮತ್ತು ಅಳಲೂರು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಕಾಂಕ್ರೀಟ್ ಕಾಮಗಾರಿ ಹಾಗೂ ಚರಂಡಿ ನಿರ್ಮಾಣ, ಪಂಚವಳ್ಳಿ ಗ್ರಾಮದ ಅಲ್ಪಸಂಖ್ಯಾತ ಸಮುದಾಯ ಕಾಲೊನಿ ರಸ್ತೆ ಕಾಂಕ್ರಿಟೀಕರಣ, ಪಶುವೈದ್ಯ ಆಸ್ಪತ್ರೆ ಉದ್ಘಾಟನೆ, ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ಬೋರೆ ಹೊಸಹಳ್ಳಿ ಗ್ರಾಮದಲ್ಲಿ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನ ಗುದ್ದಲಿ ಪೂಜೆ ಹಾಗೂ ವಾಲ್ಮೀಕಿ ಭವನ ಉದ್ಘಾಟನೆ, ಮಾಕೋಡು ಗ್ರಾಮದ ಏತ ನೀರಾವರಿ ಯೋಜನೆಯ ನಾಲೆ ರಸ್ತೆ ಅಭಿವೃದ್ಧಿ, ಆರ್. ಹೊಸಳ್ಳಿ ಗ್ರಾಮದಲ್ಲಿ ನೀರಿನ ಮೇಲ್ತೊಟ್ಟಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಒಟ್ಟಾರೆ ರಾಜ್ಯ ರಾಜಕೀಯ ಡೋಲಾಯಮಾನ ಪರಿಸ್ಥಿತಿಯಲ್ಲಿ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಕ್ಷೇತ್ರದ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವುದು ಅವರ ಉತ್ತಮ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.