ಕಳೆದ ಒಂದು ವಾರಗಳ ಹಿಂದೆ ತಾಲೂಕಿನ ಮಾಕೋಡು ಗ್ರಾಮದ ಗೌರಮ್ಮ ಎಂಬುವವರ ಮನೆಯಲ್ಲಿ ವಿದ್ಯುತ್ ವೈಯರ್ ಶಾರ್ಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವವರೆಗೆ ಅಕ್ಕಪಕ್ಕದ ಸೋಮೇಗೌಡ, ಜಯಮ್ಮ, ರಾಜಮ್ಮ ಎಂಬುವರ ಮನೆಗಳಿಗೆ ಬೆಂಕಿ ವ್ಯಾಪಿಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು, ಘಟನಾ ಸ್ಥಳಕ್ಕಾಗಮಿಸಿದ ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗ, ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆಯವರು ಸ್ಥಳ ಮಹಜರ್ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಭಾನುವಾರ ಮಾಕೋಡು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಮಹದೇವ್ ವಿದ್ಯುತ್ ಅವಘಡದಿಂದ ನಷ್ಟ ಉಂಟಾಗಿದ್ದ ಮನೆಗಳ ಬಳಿ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ ಉಪವಿಭಾಗಾಧಿಕಾರಿ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಹಾನಿಯುಂಟಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದರು.