
ಪಿರಿಯಾಪಟ್ಟಣ: ಶಾಲಾ ಮಕ್ಕಳ ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ಪೋಷಕಾಂಶಯುಕ್ತ ಮೊಟ್ಟೆ ಬಾಳೆಹಣ್ಣು ಕಡ್ಲೆಮಿಠಾಯಿ ವಿತರಿಸುತ್ತಿರುವ ಸರ್ಕಾರದ ಯೋಜನೆ ಶ್ಲಾಘನೀಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಹಳೆ ಪುರಸಭೆ ಕಟ್ಟಡ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಅಡುಗೆ ಬಡಿಸಿ ಜತೆಗೆ ಮೊಟ್ಟೆ ಬಾಳೆಹಣ್ಣು ಕಡ್ಲೆ ಮಿಠಾಯಿ ವಿತರಿಸಿ ಅವರು ಮಾತನಾಡಿದರು, ಶಿಕ್ಷಣವನ್ನು ಪ್ರೋತ್ಸಾಹಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಹಿಂದೆಯೇ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರುವ ಮೂಲಕ ಮಕ್ಕಳ ಹಸಿವಿನ ಕೊರತೆ ನೀಗಿಸಲಾಗಿತ್ತು ಇದರ ಜೊತೆಗೆ ವಿದ್ಯಾರ್ಥಿಗಳು ಸೇವಿಸುವ ಆಹಾರಕ್ಕೆ ಪೂರಕವಾಗಿ ಪೋಷಕಾಂಶಯುಕ್ತ ಮೊಟ್ಟೆ ಬಾಳೆಹಣ್ಣು ಕಡ್ಲೆಮಿಠಾಯಿ ವಿತರಿಸಿ ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಕ್ರಮ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಬಿಇಒ ಬಸವರಾಜು ಅವರು ಮಾತನಾಡಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಚಾಲ ಚಟುವಟಿಕೆಯ ನಿಗದಿತ ದಿನಗಳಲ್ಲಿ ಅಕ್ಷರ ದಾಸೋಹ ಮುಖಾಂತರ ಗುಣಮಟ್ಟದ ಆಹಾರ ವಿತರಣೆಗೆ ತಾಲ್ಲೂಕಿನಾದ್ಯಂತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭ ಬಿಆರ್ ಸಿ ಶಿವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಸಿಆರ್ ಪಿ ರವಿಕುಮಾರ್, ಇಸಿಒ ಗಳಾದ ಗಣೇಶ್, ಸತೀಶ್, ಬಿಐಇಆರ್ ಟಿ ಪುಟ್ಟರಾಜು, ಮುಖ್ಯಶಿಕ್ಷಕ ಪಿ.ರವಿ, ಶಿಕ್ಷಕರಾದ ಕೆ.ಎಸ್ ವೀಣಾ, ಎ.ಚಂದ್ರು, ಅತಿಥಿ ಶಿಕ್ಷಕಿ ಲಕ್ಷ್ಮಿ ಮತ್ತಿತರಿದ್ದರು.