ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಕೆಳಸ್ತರ ಹಾಗೂ ಮೇಲ್ವರ್ಗದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಿರಿಯಾಪಟ್ಟಣ: ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಕೆಳಸ್ತರ ಹಾಗೂ ಮೇಲ್ವರ್ಗದ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ  ಅವರು ಮಾತನಾಡಿದರು,

ಸಮಾಜದಲ್ಲಿನ ಸರಿತಪ್ಪುಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಾನು ಕೂಡ ಆಂದೋಲನ ದಿನಪತ್ರಿಕೆಯಲ್ಲಿ ವಿತರಕ ಮತ್ತು ವರದಿಗಾರರಾಗಿ ಸೇವೆ ಸಲ್ಲಿಸಿದ್ದು ಪತ್ರಕರ್ತರ ಸಂಕಷ್ಟದ ಬಗ್ಗೆ ಅರಿವಿದೆ, ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಶಕ್ತಿ ಪತ್ರಿಕೆ ಮತ್ತು ಪತ್ರಕರ್ತರಿಗಿದೆ, ತಾಲ್ಲೂಕಿನಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡುವುದರ ಜತೆಗೆ ಸ್ವಂತ ನಿವೇಶನಗಳಿಲ್ಲದ ಪತ್ರಕರ್ತರಿಗೂ ಕೂಡ ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 ಪ್ರಧಾನ ಭಾಷಣಕಾರರಾಗಿ ಅವರು ಕನ್ನಡಪ್ರಭ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಮಾತನಾಡಿ ಪತ್ರಕರ್ತರು ನಿಷ್ಪಕ್ಷಪಾತ ಪಾರದರ್ಶಕ ಜನಪರ ಕಾಳಜಿಯುಳ್ಳ ವರದಿಗಳನ್ನು ಮಾಡಿದಾಗ ಸಮಾಜದಲ್ಲಿ ನೊಂದವರ ಪರ ದನಿಗೂಡಿಸಬಹುದು, ಸ್ವಚ್ಛ ಭಾರತ, ಸೇನೆಗೆ ಸೇರುವುದು, ಭಯೋತ್ಪಾದನೆ ವಿರುದ್ಧ ಹಾಗೂ ಕಡ್ಡಾಯ ಮತದಾನದ ಅರಿವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಹ ಸಾರ್ವಜನಿಕರಿಗೆ ಮೂಡಿಸುತ್ತಿವೆ ಆದರೆ ಟಿಆರ್ ಪಿ ಹಾಗೂ ಪೈಪೋಟಿಗಾಗಿ ಸುದ್ದಿ ಮಾಡದೆ ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ಎತ್ತಿ ತೋರಿಸುವ ಧೈರ್ಯ ಮಾಡಬೇಕು, ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ರವರು ಸಹ ಪತ್ರಕರ್ತರಾಗಿ ಸಮಾಜದ ಬದಲಾವಣೆಗೆ ಶ್ರಮಿಸಿದರು, ನೈತಿಕತೆ ಮೂಲಕ ವರದಿ ಮಾಡಿದಾಗ ಪತ್ರಕರ್ತರು ಸಮಾಜದಲ್ಲಿ ಉತ್ತಮ ಹೆಸರುಗಳಿಸಬಹುದು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ ರವಿಕುಮಾರ್ ಅವರು ಮಾತನಾಡಿ ವಸ್ತುನಿಷ್ಠ ಮತ್ತು ಸಮಾಜಮುಖಿ ಸುದ್ದಿಗಳನ್ನು ಪತ್ರಕರ್ತರು ನೀಡುವ ಮೂಲಕ ಧ್ವನಿ ಇಲ್ಲದವರ ಪರ ಕರ್ತವ್ಯ ನಿರ್ವಹಿಸಿ ಮಾದರಿಯಾಗಬೇಕು, ತಾಲ್ಲೂಕಿನ ಪ್ರತಿಯೊಬ್ಬ ಪತ್ರಕರ್ತರು ಒಗ್ಗಟ್ಟಿನ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

 ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ಅವರು ಮಾತನಾಡಿ ಕೊರೋನಾ ಸಂಕಷ್ಟ ಕಾಲದಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ, ಒಬ್ಬ ವ್ಯಕ್ತಿಯ ಏಳು ಬೀಳಿನಲ್ಲಿ ಪತ್ರಕರ್ತರ ಪಾತ್ರ ಅಪಾರವಾದುದು, ಪ್ರತಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಕೋರಿದರು.

ಸಂಘದ ಅಧ್ಯಕ್ಷ  ಬೆಕ್ಕರೆ ಸತೀಶ್ ಆರಾಧ್ಯ ಅವರು ಮಾತನಾಡಿ ತಾಲ್ಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಎಲ್ಲಾ ಸದಸ್ಯರು ಹಾಗೂ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ  ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಕೋರಿದರು.

ಈ ವೇಳೆ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಗರ ವ್ಯಾಪ್ತಿ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಹಿರಿಯ ಪತ್ರಕರ್ತ ಮೈಸೂರು ಮಿತ್ರ ವರದಿಗಾರರಾದ ಪಿ.ಎಸ್ ವೀರೇಶ ರವರಿಗೆ ಸನ್ಮಾನ ಹಾಗೂ ಅತಿಥಿಗಳು ಮತ್ತು ಸಂಘದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ರಾಜ್ಯ ಕಾರ್ಯಕಾರಣಿ ನಿರ್ದೇಶಕ ರಾಘವೇಂದ್ರ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಎಂ ಕಿರಣ್ ಕುಮಾರ್, ಉದ್ಯಮಿ ಬೈಲಕುಪ್ಪೆ ಅಣ್ಣಪ್ಪ, ಜಿಲ್ಲಾ ನಿರ್ದೇಶಕ ಬಿ.ಆರ್ ಗಣೇಶ್, ತಾಲ್ಲೂಕು ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಎನ್ ವಿಜಯ್, ಪ್ರಧಾನ ಕಾರ್ಯದರ್ಶಿ ಪಿ.ಡಿ ಪ್ರಸನ್ನ, ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ನಿರ್ದೇಶಕರಾದ ಇಮ್ತಿಯಾಜ್ ಅಹಮದ್, ಬಿ.ಎಸ್ ಪ್ರಸನ್ನಕುಮಾರ್, ಕೆ.ಶಿವಣ್ಣ, ಸದಾಶಿವ, ಬಿ.ಎಂ ಸ್ವಾಮಿ, ಹೆಚ್.ಕೆ ಮಹೇಶ್ ಹಾಗೂ ಸಂಘದ ಸದಸ್ಯರು ಮತ್ತು ಪತ್ರಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top