
ಪಿರಿಯಾಪಟ್ಟಣ: ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಕ್ರಾಂತಿಕಾರಿಗಳು ಹಾಗೂ ಮಹನೀಯರನ್ನು ನೆನೆದು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಪಟ್ಟಣದಲ್ಲಿ ತಾ.ಪಂ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಡೆದ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಸ್ವಾತಂತ್ರ್ಯದ ಮೂಲಕ ಸಮಾನ ಹಕ್ಕುಗಳನ್ನು ಪಡೆದು ಜೀವಿಸುತ್ತಿರುವ ನಾವ್ಯಾರೂ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಲಿಲ್ಲ, ಪೂರ್ವಜರ ತ್ಯಾಗ ಬಲಿದಾನದ ಕ್ರಾಂತಿಕಾರಿ ಹೋರಾಟದ ಮೂಲಕ ದೇಶ ಸ್ವಾತಂತ್ರ್ಯ ಪಡೆದಿದ್ದು ಅವರನ್ನು ಸ್ಮರಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 13 ರಿಂದ 15 ರ ವರೆಗೆ ದೇಶದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಲು ಚಾಲನೆ ನೀಡಿದ್ದು ನಾವೆಲ್ಲರೂ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಸಾರಬೇಕಿದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸುತ್ತಿರುವ ಸಂದರ್ಭ ನಾವೆಲ್ಲರೂ ಹರ್ ಘರ್ ತಿರಂಗಾ ಕಾರ್ಯಕ್ರಮ ಆಚರಿಸುವ ಮೂಲಕ ದೇಶಪ್ರೇಮ ಮೈಗೂಡಿಸಿಕೊಂಡು ರಾಷ್ಟ್ರ ಹಾಗೂ ರಾಷ್ಟ್ರಧ್ವಜವನ್ನು ಗೌರವಿಸಬೇಕಿದೆ ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾ.ಪಂ ಅಂಚೆಕಚೇರಿ ಹಾಗು ವಿವಿಧೆಡೆ ತ್ರಿವರ್ಣ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಇಪ್ಪತ್ತೈದು ಸಾವಿರ ಹಾಗೂ ನಗರ ಪ್ರದೇಶದಲ್ಲಿ ಐದು ಸಾವಿರ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಿ ಹರ್ ಘರ್ ತಿರಂಗ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಸಹಾಯಕ ನಿರ್ದೇಶಕರಾದ ಕರುಣಾಕರ್, ಜಿ.ಸಿ ಮಹದೇವ್ ಮತ್ತು ಸಿಬ್ಬಂದಿ, ಪುರಸಭಾ ಅಧ್ಯಕ್ಷ ಕೆ.ಮಹೇಶ್ ಮತ್ತು ಸದಸ್ಯರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಬಿಇಒ ಬಸವರಾಜು, ಪಿಡಬ್ಲ್ಯುಡಿ ಎಇಇ ಜಯಂತ್, ಸಿಡಿಪಿಒ ಮಮತಾ, ಇನ್ಸ್ ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜೆಡಿಎಸ್ ಮತ್ತು ಬಿಜೆಪಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.