
ಪಿರಿಯಾಪಟ್ಟಣ: ಹಾಡಿ ನಿವಾಸಿಗಳಿಗೆ ಪುನರ್ವಸತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಭರವಸೆಗಳು ಕೇವಲ ಬಾಯಿ ಮಾತಿಗಷ್ಟೇ ಆಗಿದ್ದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧೆಡೆಯ ಹಾಡಿ ನಿವಾಸಿಗಳು ತಮ್ಮ ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ಪ್ರತಿ ಬಾರಿ ಅಹೋರಾತ್ರಿ ಧರಣಿ ಆರಂಭಿಸಿದ ಸಂದರ್ಭ ಸ್ಥಳಕ್ಕಾಗಮಿಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಭರವಸೆಗಳು ಇನ್ನೂ ಈಡೇರದ ಕಾರಣ ತಾಲ್ಲೂಕಿನ ಮಾಲಂಗಿ ಪಂಚವಳ್ಳಿ ಚೌತಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಹಾಡಿ ನಿವಾಸಿಗಳು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ನೇತೃತ್ವ ಹುಣಸೂರು-ಗೋಣಿಕೊಪ್ಪ ಮುಖ್ಯರಸ್ತೆಯ ಅಳಲೂರು ಬಳಿಯ ನಾಗರಹೊಳೆ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ವಸತಿ ಗೃಹ ಆವರಣದಲ್ಲಿ ಅಹೋರಾತ್ರಿ ನಿರಂತರ ಧರಣಿ ಆರಂಭಿಸಿ 20 ದಿನ ಸಮೀಪಿಸುತ್ತಿದ್ದರು ಅವರ ಗೋಳು ಕೇಳಲು ಯಾರೂ ಮುಂದಾಗದಿರುವುದು ವಿಪರ್ಯಾಸ.
ಈ ಬಾರಿ ಯಾವುದೇ ಕಾರಣಕ್ಕೂ ಬೇಡಿಕೆಗಳು ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ವಿವಿಧ ಹಾಡಿಗಳ ವಯೋವೃದ್ಧರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ಕಾಲ ದೂಡುತ್ತಿದ್ದರು ಸಮಸ್ಯೆ ಬಗೆಹರಿಸುವ ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ನಗರ ಪ್ರದೇಶಗಳಲ್ಲಿ ವಿಲಾಸಿ ಜೀವನ ನಡೆಸಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದೆ ಹಾಡಿ ನಿವಾಸಿಗಳ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕುಮಾರ್, ಪುಟ್ಟಿ, ಕೀರ್ತು, ಜಾನಕಮ್ಮ, ಸವಿತ, ಪುಟ್ಟಬಸವಯ್ಯ, ಜಯಮ್ಮ, ರೇಣುಕ, ಕವಿತ ಸೇರಿದಂತೆ ಮತ್ತಿತರ ಪ್ರತಿಭಟನಾ ನಿರತರು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಾ.ಮುಜಾಫರ್ ಅಸಾದಿ ವರದಿ ಅನ್ವಯ ಪುನರ್ವಸತಿ ಕಲ್ಪಿಸಲು ಕೈಬಿಟ್ಟಿರುವ ತಾಲ್ಲೂಕಿನ ವಿವಿಧ ಹಾಡಿ ನಿವಾಸಿ ಕುಟುಂಬಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.