ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆದ ರೈತರ ಸಭೆಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು

ಪಿರಿಯಾಪಟ್ಟಣ: ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ಅನ್ಯಾಯವಾದರೆ ಅವರ ಪರ ಹೋರಾಟಕ್ಕೆ ದೇವೇಗೌಡರ ನೇತೃತ್ವದಲ್ಲಿ  ಜೆಡಿಎಸ್ ಪಕ್ಷ ಸದಾ ಸಿದ್ಧವಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆ ಮಾರುಕಟ್ಟೆ ಆವರಣದಲ್ಲಿ ನಡೆದ ರೈತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು, ತಂಬಾಕು ಬೆಳೆಗಾರರ ಹೋರಾಟಕ್ಕೆ ನಮ್ಮಕುಟುಂಬದ ಹಿರಿಯರು ಹಿಂದಿನಿಂದಲೂ ಕೈಜೋಡಿಸಿದ್ದು ರಾಜ್ಯದ ತಂಬಾಕು ಬೆಳೆಗಾರರಿಗೆ ಅನ್ಯಾಯವಾಗಲು ಜೆಡಿಎಸ್ ಪಕ್ಷ  ಬಿಡುವುದಿಲ್ಲ, ತಂಬಾಕು ಖರೀದಿ ಕಂಪನಿಗಳಿಗೆ ರೈತರು ಅನಿವಾರ್ಯವೇ ಹೊರತು ಕಂಪನಿಗಳು ರೈತರಿಗೆ ಅನಿವಾರ್ಯವಲ್ಲ, ಕಂಪನಿಗಳು ರೈತರಿಂದ ಲಾಭಪಡೆದು ಉದ್ದಾರವಾಗಿವೆ ಹೊರತು ರೈತರ ಅಭಿವೃದ್ಧಿಯಾಗಿಲ್ಲ, ತಂಬಾಕು ರೈತರ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಹೆಚ್.ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ತಾಲೂಕಿಗೆ ಆಗಮಿಸಿ ತಂಬಾಕು ರೈತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದರು.

ಹೆಚ್.ಡಿ ಕುಮಾರಸ್ವಾಮಿಯವರು ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರೊಂದಿಗೆ ಸಭೆ ನಡೆಸುವ ವಿಷಯ ತಿಳಿದು ತಾಲ್ಲೂಕಿನ ವಿವಿಧೆಡೆಯಿಂದ ಸಾವಿರಾರು ಮಂದಿ ರೈತರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ  ಮಂಡಳಿ ಆವರಣ ಬಳಿ ಕಾದು ಕುಳಿತಿದ್ದು ಅನ್ಯಕಾರ್ಯ ನಿಮಿತ್ತ ಎಚ್ ಡಿಕೆ ಅವರು ಸಭೆಗೆ ಬರುತ್ತಿಲ್ಲ ಎಂಬ ವಿಷಯ ತಿಳಿದು ನಿರಾಶರಾದರು ಸಭೆಯ ಮಧ್ಯೆ ದೂರವಾಣಿ ಕರೆಯ ಮೂಲಕ ಎಚ್ ಡಿಕೆ ಅವರು ರೈತರನ್ನುದ್ದೇಶಿಸಿ ಮಾತನಾಡಿ  ರೈತರ ಮೇಲೆ ಲಾಠಿ ಚಾರ್ಚ್ ಮಾಡಿರುವುದು ಖಂಡನೀಯ, ಸದಾ ರೈತಪರ ನಿಲುವು ಹೊಂದಿರುವ ನಾವು ಮತ್ತು ನಮ್ಮ ಪಕ್ಷ  ನಿಮ್ಮೊಂದಿಗೆ ಇದ್ದೇವೆ, ಮುಂದಿನ ದಿನಗಳಲ್ಲಿ ತಂಬಾಕು ಬೆಳೆಗಾರರನ್ನು ಖುದ್ದು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ಉತ್ತಮ ಬೆಲೆಕೊಡಿಸಲು ಹೋರಾಟ ನಡೆಸುತ್ತೇನೆ, ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಭೆ ಪೂರ್ವನಿರ್ಧರಿತವಾದ್ದರಿಂದ ಸಭೆಗೆ ಗೈರಾಗಿದ್ದರು ನಾನೆಂದೂ ರೈತಪರ ಅವರಿಗೆ ಅನ್ಯಾಯವಾಗಲು ಬಿಡಲ್ಲ ಎಂದರು.  

ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲೂಕಿನ ರೈತರಿಗೆ ಯಾವುದೆ ಕಾರಣಕ್ಕು ಅನ್ಯಾಯವಾಗಲು ಬಿಡುವುದಿಲ್ಲ, ಕಳೆದವಾರ ಮಾರುಕಟ್ಟೆಗೆ ಭೇಟಿ ನೀಡಿ ಖರೀದಿದಾರರು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಸಂದರ್ಭ ಯಾರೂ ನಿರೀಕ್ಷೆ ಮಾಡದೆ ಇರುವಷ್ಟು ಬೆಲೆ ನೀಡುವ ಸುಳಿವು ದೊರೆತಿತ್ತು ಆದರೆ ಧಿಡೀರ್ ಬೆಲೆಕುಸಿತ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ, ಕೆಲ ರಾಜಕಾರಣಿಗಳಂತೆ ಒಳ ಒಪ್ಪಂದ ಮಾಡಿಕೊಂಡು ಕಂಪನಿಗಳು ಸರಾಸರಿ ಬೆಲೆ ನಿಗದಿಪಡಿಸಿ ತಂಬಾಕು ಕೊಳ್ಳವಂತೆ ಎಂದಿಗೂ ನಾನು ಅವಕಾಶನೀಡಲ್ಲ ಬಹಿರಂಗ  ಸಭೆಯಲ್ಲಿಯೆ ಸರಾಸರಿ ಬೆಲೆ ನಿಗದಿಪಡಿಸಲು ಒತ್ತಾಯಿಸುತ್ತೇನೆ, ಮುಂಬರುವ ದಿನಗಳಲ್ಲಿ ತಂಬಾಕಿಗೆ ಚಿನ್ನದ ಬೆಲೆ ದೊರಕಲಿದ್ದು ರೈತರು ಆತಂಕಕ್ಕೆ ಒಳಗಾಗುವುದು ಬೇಡ ಒಗ್ಗಟ್ಟಿನಿಂದ ಹೋರಾಟ ಮಾಡೋಣ, ರಸ್ತೆ ತಡೆ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದ ರೈತರನ್ನು ಬಿಡುಗಡೆ ಮಾಡಿಸಿ ಪ್ರಕರಣ ದಾಖಲಿಸದಂತೆ ಸೂಚಿಸಿದ್ದೇನೆ, ಖರೀದಿದಾರ ಕಂಪೆನಿಗಳು ಕಡಿಮೆ ದರ ನೀಡಿದರೆ ಹೆಚ್.ಡಿ ದೇವೆಗೌಡರ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ವಿಷಯ ತಂದು ಕೇಂದ್ರ ಸರ್ಕಾರವೇ ಉತ್ತಮ ಸರಾಸರಿ ಬೆಲೆಗೆ ತಂಬಾಕು ಖರೀದಿ ಮಾಡುವಂತೆ ಮನವಿ ನೀಡಲಾಗುವುದು ಎಂದರು.

ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು  ಮಾತನಾಡಿ ತಂಬಾಕು ರೈತರು ಉತ್ತಮ ಬೆಲೆ ಪಡೆಯಲು ಇರುವ ಪರಿಹಾರವೆಂದರೆ ತಂಬಾಕು ಮಾರುಕಟ್ಟೆಗೆ ನೇರವಿದೇಶಿ ಹೊಡಿಕೆಗೆ (ಎಫ್‌ಡಿಐಗೆ) ಅವಕಾಶ ನೀಡಬೇಕು ಆಗ ಮಾತ್ರ ಉತ್ತಮ ಬೆಲೆ ದೊರಕಲಿದೆ ಇಲ್ಲವಾದಲಿ ಸ್ಥಳೀಯ ಕಂಪನಿಗಳು ರೈತರಿಗೆ ಅನ್ಯಾಯ ಎಸಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದರು. 

ಸಭೆ ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದು ಮಧ್ಯಾಹ್ನ 1 ಗಂಟೆಯಾದರೂ ಆರಂಭವಾಗದ ಹಿನ್ನೆಲೆ ಮುಖಂಡರುಗಳು ಮೈಕ್ ಹಿಡಿದು ಭಾಷಣ ಮಾಡಲು ಆಗಮಿಸುತ್ತಿದ್ದಾಗ ರೈತರು ಆಕ್ರೋಶ ವ್ಯಕ್ತಪಡಿಸಿ ತಮ್ಮ ಭಾಷಣ ಸಾಕು ನಿಲ್ಲಿಸಿ ಮೊದಲು ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ಖರೀದಿದಾರ ಕಂಪೆನಿಗಳವರನ್ನು ಸಭೆಗೆ ಕರೆಯಿಸಿ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು, ಬೆಳಿಗ್ಗೆಯಿಂದ ಸಭೆಯ ಬಳಿ ಆಗಮಿಸದ ತಂಬಾಕು ಮಂಡಳಿ ಅಧಿಕಾರಿಗಳು ಶಾಸಕ ಕೆ.ಮಹದೇವ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿ ಸಭೆ ಪ್ರಾರಂಭಿಸಿದ ಬಳಿಕ ಬಂದರು.

ಬುಧವಾರದಂದು ರೈತರ ಪ್ರತಿಭಟನೆ ಹಿನ್ನೆಲೆ ಎಎಸ್ಪಿ ನಂದಿನಿ ಅವರ ನೇತೃತ್ವ ಇನ್ಸ್ ಪೆಕ್ಟರ್ ಜಗದೀಶ್, ಸಬ್ ಇನ್ ಸ್ಪೆಕ್ಟರ್ ಪ್ರಕಾಶ್ ಎಂ ಯತ್ತಿನಮನಿ, ಗೋವಿಂದ್, ಸುರೇಶ್, ಪ್ರೊಬೆಷನರಿ ಪಿಎಸ್ಐ ವರ್ಷ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.   

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣ್ ರಾವ್, ಜೆಡಿಎಸ್ ತಾಲುಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಜಿ.ಪಂ ಮಾಜಿ ಸದಸ್ಯ ಕೆ.ಎಸ್ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ರೈತ ಸಂಘ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಬಿ.ಜೆ ದೇವರಾಜ್, ಜೆಡಿಎಸ್ ವಕ್ತಾರೆ ನಜ್ಮಾ ನಜೀರ್, ಮುಖಂಡರಾದ ಗಗನ್, ಅತ್ತರ್ ಮತೀನ್, ವಿದ್ಯಾಶಂಕರ್, ದಿನೇಶ್, ಸುನಿತಾ ಮಂಜುನಾಥ್, ಪ್ರೀತಿ ಅರಸ್, ಸ್ಥಳೀಯ ಜನಪ್ರತಿನಿಗಳು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top