ಪಿರಿಯಾಪಟ್ಟಣ ತಾಲೂಕಿನಲ್ಲಿ ಶಾಸಕನಾಗಿ ಆಯ್ಕೆಗೊಂಡ ಸಂದರ್ಭದಿAದ ಸಮಯವನ್ನು ವ್ಯರ್ಥ ಮಾಡದೇ ಜನಪರ ಕೆಲಸಗಳನ್ನು ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ಸುಮಾರು 24.80 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿ ಅಧಿಕಾರ ಮಾಡಿದ ವ್ಯಕ್ತಿಯ ಕಣ್ಣಿಗೆ ಗ್ರಾಮಾಂತರ ಪ್ರದೇಶಗಳ ಸಮಸ್ಯೆ ಕಾಣಿಸಿಕೊಂಡಿದರೆ ಜನರು ಇಂದು ತಮ್ಮ ಸಮಸ್ಯೆಗಳನ್ನು ನನ್ನ ಮುಂದೆ ಹೇಳಿಕೊಳ್ಳುತ್ತಿರಲಿಲ್ಲ. ಜನರಿಂದ ಆಯ್ಕೆಯಾದ ಒಬ್ಬ ಪ್ರತಿನಿಧಿಯು ಜನರ ಪರವಾಗಿ ಕೆಲಸಗಳನ್ನು ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಪಕ್ಷ ಎಂದು ಬೇದಭಾವ ಮಾಡದೇ ಕೆಲಸ ಮಾಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಜನರು ಮತ್ತೆ ಆರ್ಶಿವಾದ ಮಾಡಿ, ಹೆಚ್ಚಿನ ಕೆಲಸ ಮಾಡಲು ಶಕ್ತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಂಪಲಾಪುರ ಗ್ರಾಮದ ಕೆರೆ ಕೋಡಿಗೆ 30 ಲಕ್ಷ ವೆಚ್ಚದ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ, ಕಂಪಲಾಪುರ ಗ್ರಾಮ ಪರಿಮಿತಿಯಲ್ಲಿ 20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ದೊಡ್ಡ ಬೇಲಾಳು ಗ್ರಾಮದಲ್ಲಿ 27.05 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ವಿ.ಜಿ ಕೊಪ್ಪಲು ಗ್ರಾಮದಲ್ಲಿ 21.18 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಚಿಕ್ಕ ಬೇಲಾಳು ಗ್ರಾಮದಲ್ಲಿ 25.29 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಹಾರಂಗಿ ಇಲಾಖೆಯ ಸುರೇಂದ್ರ, ಕಂದಾಯ ನಿರೀಕ್ಷ ಶ್ರೀಧರ್, ಮುಖಂಡರಾದ ಕೃಷ್ಣಮೂರ್ತಿ, ನಾಗರಾಜೇಗೌಡ, ಸುಂಡವಾಳು ವೆಂಕಟೇಶ್, ಮಹದೇವಣ್ಣ. ವಸಂತ್, ಸುರೇಶ್ ಸೇರಿದಂತೆ ಇತರರು ಇದ್ದರು.