
ಪಿರಿಯಾಪಟ್ಟಣ : ಕುಮಾರಸ್ವಾಮಿಯವರ ಆಡಳಿತದಲ್ಲಿ ಉತ್ತಮ ಯೋಜನೆಗಳು ಜಾರಿಗೆ ತರುವ ಮೂಲಕ ರೈತಪರ ದುಡಿದಿರುವ ಏಕೈಕ ಸರ್ಕಾರವೆಂದರೆ ಅದು ಜೆಡಿಎಸ್ ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ತಿಳಿಸಿದರು.
ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಭಾನುವಾರ ತಾಲೂಕು ಜೆಡಿಎಸ್ ಘಟಕ ಹಾಗೂ ಗ್ರಾಮಸ್ಥರವತಿಯಿಂದ ಆಯೋಜಿಸಿದ ರೈತ ಚೈತನ್ಯ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಧಿಕಾರ ನಡೆಸಿದ ಅಲ್ಪಾವಧಿ ಸಮಯದಲ್ಲಿಯೇ ರೈತರು ಹಾಗೂ ಬಡವರ ಪರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅವರ ಶ್ರೇಯೋಭಿವೃದ್ಧಿಗಾಗಿ ದುಡಿದಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಮಹದೇವ್ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಬಳಿಕ ಕರೊನಾ ಹಾಗೂ ಅತಿಯಾದ ಮಳೆಯ ಪ್ರಭಾವ ಅಂತಾ ಸಂದರ್ಭಗಳನ್ನು ಎದುರಿಸಿ ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದರು ತಾಲೂಕಿನ ಅಭಿವೃದ್ಧಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಾರೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ವಿಪಕ್ಷಗಳು ಜನಪರ ಯಾವುದೇ ಯೋಜನೆಗಳನ್ನು ನೀಡದೇ ಇರುವುದರಿಂದ ರಾಜ್ಯದ ಜನತೆಗೆ ಮತ್ತೆ ಕುಮಾರಣ್ಣ ಅವರ ಸರ್ಕಾರವನ್ನು ಬಯಸುತ್ತಿದ್ದಾರೆ. ನಮ್ಮ ತಾಲೂಕಿನಲ್ಲಿ ವಿರೋಧಿಗಳ ಮಾತಿಗೆ ಕಿವಿಗೂಡದೆ ಮುಂಬರುವ ಚುನಾವಣೆಯಲ್ಲಿ ಮತ್ತೆ ಅವಕಾಶ ಕೊಟ್ಟು ನನ್ನನು ಶಾಸಕನಾಗಿ ಆಯ್ಕೆ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಸೇವೆ ಮಾಡುತ್ತೇನೆ ಎಂದರು.
ಹಲಗನಹಳ್ಳಿ, ರಾಜನಬಿಳಗೂಳಿ, ಐಚನಹಳ್ಳಿ ಮಾರ್ಗವಾಗಿ ಕಣಗಾಲು ಗ್ರಾಮದವರೆಗೆ ವಿಶೇಷ ಬೈಕ್ ರ್ಯಾಲಿ ನಡೆಯಿತು. ಈ ವೇಳೆ ವಿವಿಧ ಗ್ರಾಮಗಳಲ್ಲಿ ಗಣ್ಯರನ್ನು ಪಟಾಕಿ ಸಿಡಿಸಿ, ಜೆಸಿಬಿಯಿಂದ ಮಳೆ ಚೆಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಪುರಸಭೆ ಅಧ್ಯಕ್ಷ ಮಹೇಶ್, ವಿವಿಧ ಗ್ರಾ.ಪಂ ಅಧ್ಯಕ್ಷರಾದ ಚಂದ್ರಮ್ಮ, ಗೀತಾ, ಚಂದ್ರೇಗೌಡ, ಮುಖಂಡರಾದ ಗೋವಿಂದೇಗೌಡ, ಐಲಾಪುರ ರಾಮು, ಹೇಮಂತ್, ಜಗದೀಶ್, ರುದ್ರಮ್ಮ ನಾಗಯ್ಯ, ಕೃಷ್ಣಪ್ಪ, ಮೋಹನ್ ರಾಜ್, ಸಿ.ಎನ್ ರವಿ ಸೇರಿದಂತೆ ಹಲವಾರು ಇದ್ದರು.