ಪಿರಿಯಾಪಟ್ಟಣ: ಆಧ್ಯಾತ್ಮಿಕ ಚಿಂತನೆಗಳ ಮೂಲಕ ಶ್ರೀ ಯೋಗಿ ನಾರಾಯಣರು ಪವಾಡ ಪುರುಷರಾಗಿದ್ದರು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಶ್ರೀ ಯೋಗಿ ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಬಳೆಗಾರ ಕುಟುಂಬದಲ್ಲಿ ಜನಿಸಿದ ಯೋಗಿ ನಾರಾಯಣರು ತ್ರಿಕಾಲ ಜ್ಞಾನಿಗಳಾಗಿ ಜನಮನ್ನಣೆ ಗಳಿಸಿದರು, ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ತಾ.ಪಂ ಇಓ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಯೋಗಿ ನಾರಾಯಣರು ಐಕ್ಯವಾದ ಕೈವಾರ ಕ್ಷೇತ್ರಕ್ಕೆ ಪಾಂಡವರು ಸಹ ವನವಾಸ ಸಂದರ್ಭ ಭೇಟಿ ನೀಡಿದ್ದ ಪುರಾವೆಗಳಿವೆ, ಯೋಗ ಧ್ಯಾನದ ಮೂಲಕ ಮನುಕುಲದ ಬದಲಾವಣೆಗೆ ಶ್ರಮಿಸಿದ ಮಹಾತ್ ಸಂತ ಯೋಗಿ ನಾರಾಯಣರು ಎಂದರು.
ತಹಸೀಲ್ದಾರ್ ಕುಂ ಇ ಅಹಮದ್ ಅವರು ಮಾತನಾಡಿ ಯೋಗಿ ನಾರಾಯಣರ ಆದರ್ಶ ಜೀವನ ಮಾರ್ಗದರ್ಶನ ಹಾಗೂ ವಿಚಾರಧಾರೆಗಳು ಸಮಾಜದ ಜನರಿಗೆ ಪ್ರಸ್ತುತವಾಗಿದೆ, ಅಪಾರ ಜ್ಞಾನಾರ್ಜನೆ ಹೊಂದಿದ ಯೋಗಿ ನಾರಾಯಣರು ಕೈವಾರ ಕ್ಷೇತ್ರದಲ್ಲಿ ಐಕ್ಯವಾಗುವ ಮೂಲಕ ಕೈವಾರ ತಾತಯ್ಯನವರು ಎಂದು ಪ್ರಸಿದ್ಧಿಯಾಗಿದ್ದಾರೆ ಎಂದರು.
ಬಲಿಜ ಸಮಾಜದ ಮುಖಂಡ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಸರ್ಕಾರ ವತಿಯಿಂದ ಶ್ರೀ ಯೋಗಿ ನಾರಾಯಣರ ಜಯಂತಿ ಕಾರ್ಯಕ್ರಮ ಆಚರಿಸಿ ಅವರ ವಿಚಾರಧಾರೆಗಳನ್ನು ಪ್ರಸ್ತುತ ಪೀಳಿಗೆಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದು ಧನ್ಯವಾದ ಹೇಳಿದರು.
ಇದೇ ವೇಳೆ ಅಣ್ಣಯ್ಯಶೆಟ್ಟಿ ಅವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯ ನಿರಂಜನ್, ಮುಖಂಡರಾದ ರಂಗಸ್ವಾಮಿ, ಗಗನ್, ನಾರಾಯಣ್, ಶಿವಣ್ಣ, ರಾಮಚಂದ್ರು, ಜಿ.ಪಂ ಎಇಇ ಮಲ್ಲಿಕಾರ್ಜುನ್, ಇನ್ಸ್ಪೆಕ್ಟರ್ ಗಳಾದ ಕೆ.ವಿ ಶ್ರೀಧರ್, ಪ್ರಕಾಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಶಿರಸ್ತೆದಾರ್ ಗಳಾದ ನಂದಕುಮಾರ್, ಟ್ರಿಜಾ, ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಶೇಖರ್, ಜಯಕುಮಾರ್ ಮತ್ತು ಗ್ರಾಮ ಲೆಕ್ಕಿಗರು, ಸಮಾಜದ ಮುಖಂಡರು ಇದ್ದರು.