ಪಿರಿಯಾಪಟ್ಟಣ : ತಾಲ್ಲೂಕಿನ 303 ಗ್ರಾಮಗಳಿಗೂ ಏಕಕಾಲಕ್ಕೆ ಶುದ್ಧಕುಡಿಯುವ ಕಾವೇರಿ ನೀರು ಬೃಹತ್ ಯೋಜನೆ ಮುಂದಿನ 18 ತಿಂಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಗ್ರಾಮದ ಹೊರಭಾಗದಲ್ಲಿರುವ ಕನ್ನಡ ಮಠದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ₹239.66 ಕೋಟಿ ರೂಗಳ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಶಂಕುಸ್ಥಾಪನೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಈ ಹಿಂದೆ ಇದ್ದ ಯುಪಿಎ ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ತರಬಹುದಿತ್ತು, ಆದರೆ ಅವರು ಆ ಕೆಲಸ ಮಾಡಲು ಮುಂದಾಗಲಿಲ್ಲ, ನಮ್ಮ ಡಬಲ್ ಇಂಜಿನ್ ಸರ್ಕಾರ ಮತ್ತು ಶಾಸಕ ಕೆ ಮಹದೇವ್ ರವರ ಪರಿಶ್ರಮದಿಂದ ಪಿರಿಯಾಪಟ್ಟಣ ತಾಲ್ಲೂಕಿಗೆ ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದರು.
ತಾಲ್ಲೂಕಿನಲ್ಲಿ 786 ಕೆರೆಗಳನ್ನು ಹೂಳು ಎತ್ತಿ, ಬಂಡು ನಿರ್ಮಾಣ ಮಾಡಿ, ಅಭಿವೃದ್ಧಿ ಮಾಡಲಾಗಿದೆ, ಇದಲ್ಲದೆ ಮುಂದಿನ 24 ತಿಂಗಳ ಒಳಗಾಗಿ ಮೈಸೂರಿನಿಂದ ಕುಶಾಲನಗರದವರೆಗೆ 4 ಪಥದ ರಸ್ತೆ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ ಈ ಬಾರಿ ನಮ್ಮ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಹಿಳೆಯರು ಮಾಡಿರುವ ಎಲ್ಲಾ ಸಾಲವನ್ನು ಮನ್ನ ಮಾಡುವ ಯೋಜನೆಯನ್ನು ಎಚ್.ಡಿ ಕುಮಾರಸ್ವಾಮಿಯವರು ಜಾರಿಗೆ ತರಲಿದ್ದಾರೆ, ಪಿರಿಯಾಪಟ್ಟಣ ಕ್ಷೇತ್ರ ಸಹಕಾರ ಕ್ಷೇತ್ರದಲ್ಲಿ ಮೊದಲನೇ ಸ್ಥಾನ ಪಡೆದಿದ್ದು, ಸಾಲ ತೀರಿಸುವುದರಲ್ಲೂ ತೆಗೆದುಕೊಳ್ಳುವುದರಲ್ಲೂ ಸೈ ಎನಿಸಿಕೊಂಡಿದ್ದಾರೆ, ರೈತ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ,, ಕರಡಿ ಲೆಕ್ಕನಕೆರೆ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡಿರುವುದೇ ದೇವೇಗೌಡರು ಅವರು ಕೊಟ್ಟ ಕೊಡುಗೆಯು ಪಿರಿಯಾಪಟ್ಟಣಕ್ಕೆ ಸಾಕಷ್ಟು ಇದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ನನಗೆ ಕೊಟ್ಟ ಅಧಿಕಾರವನ್ನು ಸಮರ್ಥಕವಾಗಿ ಬಳಸಿಕೊಂಡು, ಶೇಕಡ 80 ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಪ್ರಯತ್ನಿಸುತ್ತೇನೆ, ಸರ್ಕಾರ ಮಟ್ಟದಲ್ಲಿ ಒತ್ತಡ ಹಾಕಿ ಪ್ರತಿನಿತ್ಯ ಎರಡು ಬಾರಿ ಶುದ್ಧ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಸಾಕಷ್ಟು ಪ್ರಯತ್ನ ಮಾಡಿ, ಇಂದಿಗೆ ಪ್ರತಿಫಲ ಸಿಕ್ಕಂತಾಗಿದೆ, ಉಸ್ತುವಾರಿ ಸಚಿವರು ಎಸ್ ಟಿ ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹರವರ ಸಹಕಾರ ಎಂದಿಗೂ ಮರೆಯಲಾಗುವುದಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಮ್ಮ ತಾಲೂಕಿಗೆ ಎರಡು ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಿ, ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಿದ್ದೇನೆ, ರೈತರಿಗೆ ವಿದ್ಯುತ್ ಸಮಸ್ಯೆಯನ್ನು ಪರಿಹಾರ ಮಾಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ 6 ಸಬ್ ಸ್ಟೇಷನ್ ಅನ್ನು ಪ್ರಾರಂಭಿಸಿದ್ದೇನೆ, ಮುಂದಿನ ದಿನಗಳಲ್ಲಿ ಮತ್ತೊಂದು ಅವಕಾಶ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಜೊತೆಗೆ ರೈತರ ಪರವಾಗಿ ಕೆಲಸ ಮಾಡಲು ಮುಂದಾಗುತ್ತೇನೆ ಎಂದು ಹೇಳಿದರು.
ಸುಮಾರು ₹ 338.22 ಕೋಟಿ ರೂಗಳ ವೆಚ್ಚದಲ್ಲಿ ಪಿರಿಯಾಪಟ್ಟಣ ನಗರದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಹಾಗೂ ಒಳಚರಂಡಿ ಕಾಮಗಾರಿಗಳ ಉದ್ಘಾಟನೆ, ರಾವಂದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆ, ತಾಲ್ಲೂಕಿನ 11 ವಿವಿಧ ಗ್ರಾಮ ಪಂಚಾಯಿತಿಗಳ ಸ್ವಚ್ಛ ಭಾರತ್ ಮಿಷನ್ ಘಟಕಗಳ ಕಟ್ಟಡ ಉದ್ಘಾಟನೆ, ಬೆಟ್ಟದಪುರ ಗ್ರಾಮ ಪಂಚಾಯಿತಿ ಸಭಾಂಗಣ ಕಟ್ಟಡ ಉದ್ಘಾಟನೆ, ನಗರದ ಧರ್ಮ ಪ್ರವರ್ಥ ಸುಬ್ಬಣ್ಣನವರ ಸರ್ಕಾರಿ ಪ್ರೌಢಶಾಲೆಯ ನೂತನ 4 ಬೋಧನಾ ಕೊಠಡಿಗಳ ಉದ್ಘಾಟನೆ, ಈ ಎಲ್ಲಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು, ಇದೆ ವೇಳೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಯಿತು.
ರೈತರಿಗೆ ರಾಸುಗಳನ್ನು ಖರೀದಿ ಮಾಡಲು ಸಾಂಕೇತಿಕವಾಗಿ ಮೊದಲ ಹಂತದ ಚೆಕ್ ವಿತರಣೆ, ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ, ರೈತರಿಗೆ ಯಂತ್ರೋಪಕರಣ ಸೇರಿದಂತೆ ವಿವಿಧ ಇಲಾಖೆಯಿಂದ ಸೌಲಭ್ಯಗಳ ಹಕ್ಕುಪತ್ರವನ್ನು ವಿತರಣೆ ಮಾಡಲಾಯಿತು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಪುರಸಭೆ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಆಶಾ, ಟಿಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬೆಟ್ಟದಪುರ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ಘಟಕದ ಅಧ್ಯಕ್ಷ ರಾಜೇಗೌಡ, ಆರ್.ಟಿ ಸತೀಶ್, ಕೃಷ್ಣಮೂರ್ತಿ,ಸುರೇಶ್ ಬಾಬು, ಇಒ ಕೃಷ್ಣಕುಮಾರ್, ಶರತ್ ಬಾಬು, ಸೋಮಯ್ಯ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.