ಪಿರಿಯಾಪಟ್ಟಣ: ರೈತರು ಕಾರ್ಮಿಕರು ಮಧ್ಯಮ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಚನ್ನೇನಹಳ್ಳಿ ಗ್ರಾಮದಲ್ಲಿ ಅವರು ಮಾತನಾಡಿದರು, ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ, ನಾನು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಪರಿಗಣಿಸಿ ಮತ್ತೊಮ್ಮೆ ನನಗೆ ಶಾಸಕನಾಗಲು ಅವಕಾಶ ನೀಡಿದರೆ ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವೆ, ಕೋವಿಡ್ ಸಂಕಷ್ಟ ಪರಿಸ್ಥಿತಿ, ನೆರೆ ಪರಿಸ್ಥಿತಿ, ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದಲ್ಲಿ ಇದ್ದದ್ದು ಸೇರಿದಂತೆ ಎಲ್ಲಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ ತಾಲ್ಲೂಕಿಗೆ ಸಾಕಷ್ಟು ಅನುದಾನ ತಂದು ಗ್ರಾಮಗಳ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೃಪ್ತಿ ನನಗಿದೆ ಕೆಲಸ ಮಾಡುವವರ ಕೈ ಹಿಡಿಯುವ ಸಲುವಾಗಿ ಮತ್ತೊಮ್ಮೆ ಬೆಂಬಲಿಸಿ, ಕಾಂಗ್ರೆಸ್ ಮತ್ತು ಬಿಜೆಪಿಯವರ ವದಂತಿಗಳಿಗೆ ಕಿವಿಗೊಡದೆ ನನಗೆ ಬೆಂಬಲ ನೀಡುವುದರಿಂದ ಅಭಿವೃದ್ಧಿ ಮಾಡುವವರ ಪರ ತಾಲ್ಲೂಕಿನ ಜನತೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಿ ಎಂದರು.
ಮೈಮೂಲ್ ನಿರ್ದೇಶಕ ಎಚ್.ಡಿ ರಾಜೇಂದ್ರ ಹಾಗು ವಕೀಲ ಜೆ.ಎಸ್ ನಾಗರಾಜು ಅವರು ಮಾತನಾಡಿ ಕೆ.ಮಹದೇವ್ ಅವರು ಮೊದಲ ಬಾರಿಗೆ ಶಾಸಕರಾದರು ತಾಲೂಕಿನ ಅಭಿವೃದ್ಧಿ ಇಚ್ಚಾ ಶಕ್ತಿಯಿಂದ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಿದ್ದು ಮುಂಬರುವ ಚುನಾವಣೆಯಲ್ಲಿಯೂ ಗೆಲ್ಲಿಸಿ ತಮ್ಮಗಳ ಸೇವೆಗೆ ಅವಕಾಶ ನೀಡುವಂತೆ ಕೋರಿದರು.
ಈ ವೇಳೆ ಹಮ್ಮಿಗೆ, ಚೌಡೇನಹಳ್ಳಿ, ಮಾಗಳಿ, ಮುತ್ತೂರು, ಚಿಟ್ಟೇನಹಳ್ಳಿ, ಕಿರಂಗೂರು, ನಂದಿನಾಥಪುರ ಹಾಗು ಹಲವು ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಯಿತು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ವಕೀಲ ಗೋವಿಂದೇಗೌಡ, ಎಸ್.ರಾಮು, ಸಿ.ಎನ್ ರವಿ, ಕಿರಂಗೂರು ಮಹದೇವ್, ಪ್ರೀತಿ ಅರಸ್, ಸುನೀತಾ ಮಂಜುನಾಥ್, ನಾಗರಾಜ್, ರಾಮಲಿಂಗು ಹಾಗೂ ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.