ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಹರಾಜು ಪ್ರಕ್ರಿಯೆಗೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ. ಮಹದೇವ್ ಚಾಲನೆ ನೀಡಿದರು.

ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಮಹದೇವ್ ಜಂಟಿಯಾಗಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು. ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ತಂಬಾಕಿಗೆ ಕೆ.ಜಿ.ಯೊಂದಕ್ಕೆ ರೂ. 175 ಗಳಿಗೆ ತಂಬಾಕು ಖರೀದಿದಾರ ಕಂಪೆನಿಗಳು ಖರೀದಿಸುವ ಮೂಲಕ ಹರಾಜು ಪ್ರಕ್ರಿಯೆಗೆ ಸೋಮವಾರ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಕೆಲವು ರೈತರು ಉತ್ತಮ ಬೆಲೆ ಕೊಡಿಸಿ ಈ ಬೆಲೆ ಸಮಾಧಾನ ತರುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತರನ್ನು ಸಮಾಧಾನ ಪಡಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಸಂಸದನಾಗಿ ಆಯ್ಕೆಯಾದಾಗಿನಿಂದ ಪ್ರತಿ ವರ್ಷ ಉತ್ತಮ ಸರಾಸರಿ ಬೆಲೆ ದೊರೆಯುತ್ತಿದೆ. ಇನ್ನು ಮುಂದೆ ಸಹ ಬೆಲೆ ಕೊಡಿಸಲು ಯತ್ನಿಸಲಾಗುವುದು. ರೈತರ ಹಿತ ಕಾಪಾಡಲು ಹುಟ್ಟಿಕೊಂಡಿರುವ ತಂಬಾಕು ಬೆಳೆಗಾರರ ಸಂಘಟನೆಗಳು ಖರೀದಿದಾರರ ಪರ ಲಾಬಿಯಲ್ಲಿ ತೊಡಗಿವೆ ಎಂದು ದೂರಿದರು. ರೈತರನ್ನು ಪ್ರತಿನಿಧಿಸುವ ತಂಬಾಕು ಮಂಡಳಿ ಸದಸ್ಯರು ಸಹ ಬೆಲೆ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕಂಪನಿಗಳು ಈ ಬಾರಿ ಸರಾಸರಿ ಬೆಲೆ ಕೆ.ಜಿ.ಯೊಂದಕ್ಕೆ ಕನಿಷ್ಠ 155 ರೂ ನೀಡುವ ಮೂಲಕ ರೈತರ ಹಿತ ಕಾಪಾಡುವಂತೆ ಸೂಚಿಸಿದರು. ನಾನು ಶಾಸಕ ಕೆ.ಮಹದೇವ್ ಜೊತೆಯಲ್ಲಿ ಬೆಲೆಯ ಕುರಿತು ನಿಗಾ ವಹಿಸಿ, ಅನಿರೀಕ್ಷಿತವಾಗಿ ತಂಬಾಕು ಮಂಡಳಿಗೆ ಭೇಟಿ ನೀಡುತ್ತೇವೆ ಎಂದರು. ದಲ್ಲಾಳಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ ಈ ವರ್ಷ ತಾಲ್ಲೂಕಿನಾದ್ಯಂತ ಸುರಿದ ಅತಿವೃಷ್ಟಿಯಿಂದಾಗಿ ತಂಬಾಕು ಇಳುವರಿ ಕುಂಠಿತವಾಗಿದೆ, ತಂಬಾಕು ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು ಇಳುವರಿ ಕುಂಠಿತ ದಿಂದಾಗಿ ತಂಬಾಕು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ಕೆಲವೆಡೆ ರೈತರ ಜಮೀನುಗಳಲ್ಲಿ ತೇವಾಂಶ ಹೆಚ್ಚಳದಿಂದಾಗಿ ತಂಬಾಕು ಜಮೀನಿನಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿತ್ತು, ಈ ಎಲ್ಲ ಸಮಸ್ಯೆಗಳನ್ನು ಮನಗಂಡ ತಂಬಾಕು ಖರೀದಿದಾರ ಕಂಪೆನಿಗಳು ಈ ಸಾಲಿನಲ್ಲಿ ಉತ್ತಮ ದರ ನೀಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿಯ ಪ್ರಾದೇಶಿಕ ಹರಾಜು ವ್ಯವಸ್ಥಾಪಕ ಎಸ್. ಎಸ್.ಪಾಟೀಲ್, ಹರಾಜು ಅಧೀಕ್ಷಕರಾದ ಗೋಪಾಲ್, ಮಹದೇವಯ್ಯ, ಮಂಜುನಾಥ್, ಜಿ.ಪಂ. ಸದಸ್ಯರಾದ ಕೆ.ಸಿ. ಜಯಕುಮಾರ್, ಕೆ.ಎಸ್. ಮಂಜುನಾಥ್, ತಾ.ಪಂ. ಸದಸ್ಯರಾದ ಆರ್‍.ಎಸ್‍.ಮಹದೇವ್, ರಂಗಸ್ವಾಮಿ, ಎಸ್.ರಾಮು, ಟಿ.ಈರಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top