ವಿದ್ಯಾರ್ಥಿಗಳು ಸ್ವಚ್ಛತೆ ಮಹತ್ವವನ್ನು ಇತರರಿಗೂ ತಿಳಿಸುವ ಮೂಲಕ ಕಾಯಿಲೆಗಳಿಂದ ದೂರವಿದ್ದು ಆರೋಗ್ಯಕರ ಜೀವನಕ್ಕೆ ಒತ್ತು ನೀಡಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಜಂತು ಹುಳುವಿನ ಬಾಧೆಯಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಬೆಳವಣಿಗೆ ಕುಂಠಿತದ ಲಕ್ಷಣಗಳು ಕಂಡುಬರುತ್ತವೆ, ನಿಯಮಿತವಾಗಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ಸೇವಿಸುವುದರಿಂದ ಜಂತುಹುಳು ಬಾಧೆಯಿಂದ ತಪ್ಪಿಸಿ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದಾಗಿದೆ, ಸರ್ಕಾರವು ವಿದ್ಯಾರ್ಥಿಗಳ ಆರೋಗ್ಯಕರ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಗಳು ಪರಿಪೂರ್ಣವಾಗಿ ಅನುಷ್ಠಾನಗೊಳ್ಳಬೇಕಿದೆ ಎಂದರು. 

    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ ಲತಾ ಮಾತನಾಡಿ 1 ವರ್ಷದಿಂದ 19 ವರ್ಷದವರೆಗಿನ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಜಂತು ಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುತ್ತಿದ್ದು ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಮತ್ತು  ಖಾಸಗಿ ಶಾಲೆಗಳಲ್ಲಿ ಈ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ, ಪ್ರತಿ ಆರು ತಿಂಗಳಿಗೊಮ್ಮೆ ಈ ಮಾತ್ರೆ ಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಈ ಮಾತ್ರೆ ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಜಂತು  ಹುಳುವಿನ ಬಾಧೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.  

    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿ.ಆರ್ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯ್, ಉಪ ಪ್ರಾಂಶುಪಾಲ ಮಹದೇವ್, ಮುಖಂಡರಾದ ವಿ.ಜಿ ಅಪ್ಪಾಜಿಗೌಡ, ತಾಲೂಕು ದೈಹಿಕ ಪರಿವೀಕ್ಷಕ ರಘುಪತಿ, ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ಲಲಿತಾ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು  ಶಿಕ್ಷಕರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top