ಪಿರಿಯಾಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ. ಮಹದೇವ್ ಮಾತನಾಡಿದರು.

ವಿಶ್ವದಲ್ಲೇ ಶ್ರೇಷ್ಠ ಪರಂಪರೆ ಹೊಂದಿರುವ ಕನ್ನಡ ನಾಡು ನುಡಿ ಸಂಸ್ಕೃತಿ ವೈಭವವನ್ನು ಪ್ರತಿಯೊಬ್ಬರೂ ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಹೇಳಿದರು. 

    ಪಟ್ಟಣದ ಗೋಣಿಕೊಪ್ಪ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ  ನಡೆದ 64ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು, ಕನ್ನಡ ನೆಲ, ಜಲ, ನುಡಿ, ಗಡಿಯನ್ನು ಕಾಯ್ದುಕೊಳ್ಳಲು ನಾವೆಲ್ಲರೂ ವಿಫಲರಾಗಿದ್ದು ಕನ್ನಡಿಗರ ಹೃದಯ ವೈಶಾಲ್ಯ ದಿಂದಾಗಿ ಬೆಳೆದು ನಿಂತಿರುವ ಕನ್ನಡ ನಾಡನ್ನು ಉಳಿಸುವಲ್ಲಿ ನಾವು ಜಾಗೃತಿ ವಹಿಸುತ್ತಿಲ್ಲ, ಈಗಾಗಲೇ   ಕಾಸರಗೋಡು, ನೀಲಗಿರಿ, ಅನಂತಪುರ, ಸೇರಿದಂತೆ ಹಲವು ಪ್ರದೇಶಗಳನ್ನು ನೆರೆ ರಾಜ್ಯಗಳಿಗೆ ಬಿಟ್ಟುಕೊಟ್ಟಿರುವ ನಾವು ಕರ್ನಾಟಕದಲ್ಲೇ ಕನ್ನಡಕ್ಕಾಗಿ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ತರುವಲ್ಲಿ ದೇಜಗೌ ಅವರ ಪಾತ್ರ ಮಹತ್ವದ್ದಾಗಿದ್ದು, ರಾಷ್ಟ್ರಕವಿ ಕುವೆಂಪು ಅವರು ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡದ ಎಂಟು ಮಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆಯಲು ನಾಂದಿ ಹಾಡಿದ್ದಾರೆ ಎಂದರು . ಕನ್ನಡ ದಲ್ಲಿರುವಷ್ಟು ಕವಿಗಳು, ಮಹಾಕಾವ್ಯಗಳು ಇಡೀ ಜಗತ್ತಿನಲ್ಲೇ ಬೇರಾವ ಭಾಷೆಯಲ್ಲೂ ಇಲ್ಲ ಎಂಬುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ ಎಂದರು.

    ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಮಹದೇವ್ ಮಾತನಾಡಿ ಜನಪದ ಸಾಹಿತ್ಯ, ವಚನ ಸಾಹಿತ್ಯ, ಹಳೆಗನ್ನಡ ಸಾಹಿತ್ಯ, ಮತ್ತು ಆಧುನಿಕ ಕನ್ನಡ ಸಾಹಿತ್ಯಗಳು ಕನ್ನಡದ ಆಸ್ತಿಯಾಗಿದ್ದು ವಿಶ್ವ ಶ್ರೇಷ್ಠ ಸಂಗೀತ, ಕಲೆ ಸಂಸ್ಕೃತಿಯ ಬೀಡು ನಮ್ಮದಾಗಿದೆ, ಪರಕೀಯ ಭಾಷಾ ವ್ಯಾಮೋಹವನ್ನು ಬಿಟ್ಟು ಕನ್ನಡಿಗರು ನಾಡು ನುಡಿ ಗೌರವಿಸಬೇಕಿದೆ, ಪಿರಿಯಾಪಟ್ಟಣದಲ್ಲಿ ಕಸಾಪ ಭವನ ನಿರ್ಮಿಸಲು ಸೂಕ್ತ ನಿವೇಶನ ನೀಡುವುದಾಗಿ ಭರವಸೆ ನೀಡಿದರು.

     ಇದೇ ವೇಳೆ ತಾಲೂಕು ಕಸಾಪ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿ ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ಅರ್ಜಿಗಳನ್ನು ವಿತರಿಸಿ ಹೆಚ್ಚಿನ ಸಂಖ್ಯೆಯ ನೋಂದಣಿ ಮಾಡಿಸುವಂತೆ ತಿಳಿಸಿದರು, ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು, ಕನ್ನಡ ಭಾಷೆಗೆ ತಮ್ಮದೇ ಆದಂತಹ ವಿಶಿಷ್ಟ ಕೊಡುಗೆಯನ್ನು ನೀಡಿರುವ ತಾಲೂಕಿನ ಐವರನ್ನು ಸನ್ಮಾನಿಸಿ ಗೌರವಿಸಲಾಯಿತು, ವೇದಿಕೆ ಕಾರ್ಯಕ್ರಮಕ್ಕೂ ಮೊದಲು ತಾಲೂಕು ಆಡಳಿತ ಭವನ ಬಳಿ ಬೆಟ್ಟದಪುರ ಉಪ ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. 

ಈ ಸಂದರ್ಭ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸದಸ್ಯ ಟಿ.ಈರಯ್ಯ, ಇಒ ಡಿ.ಸಿ. ಶ್ರುತಿ, ಪುರಸಭೆ ಸದಸ್ಯರಾದ ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್, ಪಿ.ಎನ್ ವಿನೋದ್, ನಿರಂಜನ್, ಮುಖ್ಯಾಧಿಕಾರಿ ಚಂದ್ರಕುಮಾರ್, ಬಿಇಒ ರಾಮಾರಾಧ್ಯ, ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ರಘುಪತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗ, ವಿವಿಧ ಸರ್ಕಾರಿ ಇಲಾಖಾ ನೌಕರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top