ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಖಾಸಗಿ ಶಾಲೆಯಲ್ಲಿನ ವಾತಾವರಣ ನಿರ್ಮಿಸಿರುವ ಅತ್ತಿಗೋಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಕಾರ್ಯ ಇತರ ಶಾಲೆಗಳಿಗೆ ಮಾದರಿಯಾಗಲಿ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಅತ್ತಿಗೋಡು ಸರ್ಕಾರಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಈಚಿನ ದಿನಗಳಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ತೋರುವುದರ ಜೊತೆಗೆ ಅಭಿವೃದ್ಧಿಯಲ್ಲಿ  ಖಾಸಗಿ ಶಾಲೆಗಳಿಗಿಂತ ಉತ್ತಮ ಸಾಧನೆ ತೋರುತ್ತಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ಉತ್ತಮ ಕಲಿಕೆಯ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಪೋಷಕರು ಕಂಡ ಕನಸು ನನಸು ಮಾಡುವಂತೆ ತಿಳಿಸಿದರು.

 ಮಾಜಿ ಶಾಸಕ ಎಚ್.ಸಿ ಬಸವರಾಜು ಮಾತನಾಡಿ ಜನಪ್ರತಿನಿಧಿಗಳೊಂದಿಗೆ ಸ್ಥಳೀಯ ಗ್ರಾ.ಪಂ ಕಚೇರಿ, ಹಿರಿಯ ವಿದ್ಯಾರ್ಥಿಗಳು, ದಾನಿಗಳು, ಪೋಷಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಖಾಸಗಿ ಶಾಲೆಯಲ್ಲಿ ಸಿಗುವ ಮೂಲಭೂತ ಸೌಕರ್ಯಗಳಿಗಿಂತ ಹೆಚ್ಚಿನದು ಅತ್ತಿಗೋಡು ಸರ್ಕಾರಿ ಶಾಲೆಯಲ್ಲಿ ಸಿಗಲು ಶ್ರಮಿಸಿದ ಶಿಕ್ಷಕರೆಲ್ಲರಿಗೂ ಅಭಿನಂದನೆ ತಿಳಿಸಿ ರಾಜ್ಯಕ್ಕೆ ಮಾದರಿಯಾಗಿರುವ ಅತ್ತಿಗೋಡು ಸರ್ಕಾರಿ ಶಾಲೆಯ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಸಚಿವರಿಗೆ ತಿಳಿಸಿ  ಮುಂದಿನ ದಿನಗಳಲ್ಲಿ ಶಾಲೆಗೆ ಭೇಟಿ ನೀಡಿಸುವುದಾಗಿ ತಿಳಿಸಿದರು.

  ಪ್ರೌಢಶಾಲಾ ಮುಖ್ಯ ಶಿಕ್ಷಕ ನಾಗಶೆಟ್ಟಿ ಮಾತನಾಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಖಾಸಗಿ ಶಾಲೆಗಳಲ್ಲಿ ದೊರಕುವ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಸಮುದಾಯದ ಸಹಕಾರದೊಂದಿಗೆ ಶಾಲೆ ಅಭಿವೃದ್ಧಿಯ ಗುರಿಯೊಂದಿಗೆ ಶಿಕ್ಷಕರೆಲ್ಲರೂ ಕರ್ತವ್ಯ ನಿರ್ವಹಿಸುತ್ತಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

    ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕಿ ನೇತ್ರಾವತಿ ಶಿವದೇವಪ್ಪ ಪೋಷಕರಿಗೆ ವೈಜ್ಞಾನಿಕ ಶಿಕ್ಷಣದ ಅರಿವು ಮತ್ತು ಬಾಲಕಿಯರ ಶಿಕ್ಷಣದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

    ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್ ಮಾತನಾಡಿದರು, ಶಾಲಾ ಅಭಿವೃದ್ಧಿಗೆ ಸಹಾಯ ನೀಡಿದ ಬೆಂಗಳೂರಿನ ನಿವೃತ್ತ ಕೆಎಎಸ್ ಅಧಿಕಾರಿ 

ಎ.ಎಸ್ ಕಾಂತರಾಜು, ನಿವೃತ್ತ ಸರ್ಕಾರಿ ನೌಕರ ಎ.ಎಸ್ ಸ್ವದೇಶ್, ವಾಣಿಜ್ಯೋದ್ಯಮಿ

 ಡಾ.ಬಿ ನಾಗರಾಜ್ ಅವರಿಗೆ ಸರ್ಕಾರಿ ಶಾಲಾ ಪೋಷಕ ರತ್ನ ಬಿರುದನ್ನು ನೀಡಿ ಸನ್ಮಾನಿಸಲಾಯಿತು.  ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಪೂರ್ಣ ಅಂಕ ಪಡೆದವರು, ಪ್ರತಿ ತರಗತಿಯಲ್ಲಿನ ಪ್ರತಿಭಾನ್ವಿತರಿಗೆ ಬಹುಮಾನ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಹಲವರು ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಗೌರವಿಸಿದರು, ಶಾಲಾ ಮಂತ್ರಿ ಮಂಡಲದ ಉತ್ತಮ ಸದಸ್ಯರು, ಶಾಲೆಯ ಉತ್ತಮ ಸ್ವಯಂಸೇವಕರು ಹಾಗೂ ಉತ್ತಮ ಕ್ರೀಡಾಪಟುಗಳನ್ನು ಗೌರವಿಸಲಾಯಿತು. 

     ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಮಲ್ಲಿಕಾರ್ಜುನ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣೇಗೌಡ, ಸದಸ್ಯರಾದ 

ಗೌರಿಜಯ, ಆರತಿ, ಪಿಡಿಒ ಮನು, ಬಿಜೆಪಿ ತಾಲೂಕು ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ಹಿರಿಯ ವಕೀಲ ಜವರೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು, ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರು, ಪೋಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.  

Leave a Comment

Your email address will not be published. Required fields are marked *

error: Content is protected !!
Scroll to Top