ಪ್ರಸಕ್ತ ವರ್ಷ ತಂಬಾಕು ಮಂಡಳಿ ನಿಗದಿ ಪಡಿಸಿದ ಪ್ರಮಾಣದ ತಂಬಾಕು ಮಾತ್ರ ಬೆಳೆಯುವಂತೆ ತಂಬಾಕು ಬೆಳೆಗಾರರಿಗೆ ಶಾಸಕ ಕೆ.ಮಹದೇವ್ ಸಲಹೆ ನೀಡಿದರು.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ರಸಗೊಬ್ಬರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಪ್ರಯತ್ನದಿಂದಾಗಿ ಈ ಬಾರಿ ರಸಗೊಬ್ಬರ ವಿತರಣೆ ಶೀಘ್ರವಾಗಿ ಆರಂಭಗೊಂಡಿದ್ದು ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತಂಬಾಕು ನಾಟಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ, ಕಳೆದ ಸಾಲಿನಲ್ಲಿ ತಂಬಾಕು ಮಂಡಳಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೆಳೆದಿದ್ದರಿಂದ ಬೆಲೆ ಕುಸಿತಗೊಂಡಿದ್ದು ತಂಬಾಕು ಬೆಳೆಗಾರರು ನಷ್ಟ ಅನುಭವಿಸಲು ಕಾರಣವಾಯಿತು, ಈ ಬಾರಿ ಮಂಡಳಿಯು ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಂಬಾಕನ್ನು ಬೆಳೆಯುವುದರ ಜೊತೆಗೆ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಂತೆ ತಿಳಿಸಿದರು, ಕೋವಿಡ್-19 ಮಹಾಮಾರಿ ಯಿಂದಾಗಿ ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿದ್ದು ಇದು ಸುಧಾರಣೆಯಾಗಲು ಇನ್ನೂ ಹಲವು ದಿನಗಳೇ ಬೇಕಿವೆ, ಕರೋನಾ ಲಾಕ್ ಡೌನ್ ತೆರವುಗೊಂಡ ಬಳಿಕ ಕಳೆದ ಸಾಲಿನಲ್ಲಿ ಮಾರಾಟವಾಗದೆ ಉಳಿದಿರುವ ತಂಬಾಕನ್ನು ಶೀಘ್ರವೇ ಮಾರಾಟ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

   ಈ ಸಂದರ್ಭ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್, ಹರಾಜು ನಿರೀಕ್ಷಕರಾದ ಮಂಜುನಾಥ್, ಬ್ರಿಜ್ ಭೂಷಣ್, ತಾ.ಪಂ ಸದಸ್ಯ ಆರ್.ಎಸ್ ಮಹದೇವ್, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್, ಪುರಸಭಾ ಸದಸ್ಯರಾದ ನಿರಂಜನ್, ಪ್ರಕಾಶ್ ಸಿಂಗ್, ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ  ಪರಮೇಶ್, ರೈತ ಮುಖಂಡ  ಪ್ರಕಾಶ್ ರಾಜೇಅರಸ್  ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top