ಗ್ರಾ.ಪಂ ಗಳ ಮುಖಾಂತರ ನರೇಗಾ ಯೋಜನೆಯಡಿ ರೈತರಿಗೆ ಉದ್ಯೋಗ ಸೃಷ್ಟಿಸಿ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಿರುವ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಚಿಟ್ಟೇನಹಳ್ಳಿ ಗ್ರಾ.ಪಂ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬದು ನಿರ್ಮಾಣ ಅಭಿಯಾನ-2020 ಕಾರ್ಯಕ್ರಮಕ್ಕೆ ಚಿಟ್ಟೇನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ನರೇಗಾ ಯೋಜನೆಯಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರು ಕೃಷಿ ಹೊಂಡ ಹಾಗೂ ಬದು ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಗ್ರಾ.ಪಂ ಮಟ್ಟದಲ್ಲಿ ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳ ಮೂಲಕ ಹಲವು ಸವಲತ್ತುಗಳನ್ನು ರೈತರಿಗೆ ನೀಡುತ್ತಿದ್ದು ರೈತರು ಜಾಗೃತರಾಗಿ ಎಲ್ಲ ಮಾಹಿತಿಗಳನ್ನು ಬಳಸಿಕೊಳ್ಳಬೇಕಿದೆ, ಕೃಷಿ ಹೊಂಡ ಹಾಗೂ ಬದು ನಿರ್ಮಾಣದಿಂದ ಭೂಮಿಯಲ್ಲಿ ತೇವಾಂಶ ಉಳಿದುಕೊಳ್ಳಲು ಸಹಕಾರಿಯಾಗಿ ಬೆಳೆಗಳಿಗೆ ಪೂರಕವಾಗುತ್ತದೆ, ಕೊರೊನಾ ನಡುವೆ ರೈತರ ನೆರವಿಗಾಗಿ ಸರ್ಕಾರ ನರೇಗಾ ಮೂಲಕ ತಂದಿರುವ ಈ ಯೋಜನೆ ಶ್ಲಾಘನೀಯ, ಕಾಮಗಾರಿಗಳ ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು, ಪ್ರಚಾರದ ಕೊರತೆಯಿಂದಾಗಿ ಸರ್ಕಾರದ ಸವಲತ್ತುಗಳು ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ, ಅಧಿಕಾರಿಗಳು ತಮ್ಮ ಇಲಾಖೆ ಮಾಹಿತಿಗಳ ಉತ್ತಮ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದರು.

    ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್ ಮಾತನಾಡಿ ನರೇಗಾ ಯೋಜನೆಯಡಿ 55ಸಾವಿರ ಮಾನವ ದಿನ ಸೃಷ್ಟಿ ಮೂಲಕ ಜಿಲ್ಲೆಯಲ್ಲಿ ತಾಲೂಕು ಎರಡನೇ ಸ್ಥಾನದಲ್ಲಿದೆ, ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿ ಕೃಷಿ ಹೊಂಡ ಮತ್ತು ಬದು ನಿರ್ಮಾಣಕ್ಕೆ ರೈತರು ಮುಂದಾಗಬೇಕು ಎಂದರು.

    ಇದೇ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಸಿದ್ದರಾಜು, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸಾದ್ ತಮ್ಮ ಇಲಾಖೆಗಳ ಮುಖಾಂತರ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

     ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಸಿ.ಟಿ ರವಿ, ಸ್ವಾಮಿಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಮುಖಂಡರಾದ ಯತಿರಾಜೇಗೌಡ, ಚಂದ್ರಶೇಖರಯ್ಯ, ಪಿಡಿಒ ನರಸಿಂಹಮೂರ್ತಿ, ಗ್ರಾ.ಪಂ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top