ತಾಲೂಕಿನ ಹಾಡಿಗಳ ಅಭಿವೃದ್ಧಿಗಾಗಿ ಸದಾ ಸಿದ್ಧನಿದ್ದು ಹಾಡಿ ನಿವಾಸಿಗಳ ಪರ ಹೋರಾಟ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಶಾಸಕ ಕೆ.ಮಹದೇವ್ ಹೇಳಿದರು.

     ತಾಲೂಕಿನ ಕೋಗಿಲವಾಡಿ ಬಳಿಯ ವರ್ತಿ ಮತ್ತು ಹಳೆಕೆರೆ ಹಾಡಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು, ಶಾಸಕನಾಗಿ ಆಯ್ಕೆಯಾದಾಗಿನಿಂದ ತಾಲೂಕಿನಲ್ಲಿರುವ ಹಾಡಿಗಳ ಅಭಿವೃದ್ಧಿಗಾಗಿ ಹಲವು ಬಾರಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಂಬಂಧಿಸಿದ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಮನವರಿಕೆ ಮಾಡಿದ್ದೇನೆ, ಸಚಿವರು ಸಹ ಮನವಿಗೆ ಸ್ಪಂದಿಸಿ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದು ಮುಂದಿನ ದಿನಗಳಲ್ಲಿ ಹಾಡಿಗಳಲ್ಲಿನ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮನೆ, ರಸ್ತೆ, ಶಾಲೆ ಕಲ್ಪಿಸಲು ಹೋರಾಟ ನಡೆಸಿ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದರು. ಹಾಡಿ ನಿವಾಸಿಗಳು ಸಹ ಎಲ್ಲರೂ ಒಟ್ಟಾಗಿ ಒಂದೇ ಕಡೆ ವಾಸಿಸಲು ತೀರ್ಮಾನ ಮಾಡಿದರೆ ಎಲ್ಲ ಮನೆಗಳನ್ನು ಸಾಮೂಹಿಕವಾಗಿ ಒಂದೆಡೆ ನಿರ್ಮಿಸಲು ಅಗತ್ಯವಿರುವ ಭೂಮಿ ಮಂಜೂರು ಮಾಡಿಸಬಹುದು, ಅರಣ್ಯ ಹಕ್ಕು ಕಾಯ್ದೆಯಡಿ ತಮಗೆ ದೊರೆತಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂದರು, ಎಲ್ಲರೂ ಒಟ್ಟಾಗಿ ವಾಸಿಸಲು ಸಮ್ಮತಿಸಿದರೆ 20*30 ಅಥವಾ 30*40ಅಳತೆಯ ಮನೆ ಮಂಜೂರಾತಿಗೆ ಗ್ರಾ.ಪಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ ಜವಾಬ್ದಾರಿ ನಿಮ್ಮಗಳ ಮೇಲಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

     ಹಾಡಿ ಮುಖಂಡರುಗಳಾದ ರಾಜೇಶ್, ಮಧು, ಭೋಜಯ್ಯ ಅವರು ಮಾತನಾಡಿ ಹಾಡಿಗಳಲ್ಲಿ ಸುಮಾರು 100ರಿಂದ120 ಕುಟುಂಬಗಳು ವಾಸಿಸುತ್ತಿದ್ದು ಅರಣ್ಯ ಹಕ್ಕು ಕಾಯ್ದೆಯಡಿ ಜಮೀನಿನ ಹಕ್ಕುಪತ್ರ ವಿತರಣೆ ಸಮರ್ಪಕವಾಗಿ ನಡೆದಿಲ್ಲ, ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ, ಅರಣ್ಯ ಇಲಾಖೆ ವತಿಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ಕುಂಟಿತವಾಗುತ್ತಿದೆ ಎಂದು ಆರೋಪಿಸಿದರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹ ಹಾಡಿಗಳ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಕಿಡಿಕಾರಿದರು.

     ಈ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಚೌತಿ ಗ್ರಾ.ಪಂ ಅಧ್ಯಕ್ಷ ರವಿ, ಸದಸ್ಯ ಗೋವಿಂದೇಗೌಡ, ಪಿಡಿಒ ಮೋಹನ್ ಕುಮಾರ್,  ಮುತ್ತೂರು ಗ್ರಾ.ಪಂ ಅಧ್ಯಕ್ಷ ಸುನಂದ, ಮುಖಂಡರಾದ  ಎಸ್.ಆರ್.ಎಸ್ ಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪಿಡಬ್ಲ್ಯುಡಿ ಎಇಇ ನಾಗರಾಜ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಚೆಸ್ಕಾಂ ಎಇಇ ಕಲೀಂ ಮತ್ತು ಹಾಡಿ ನಿವಾಸಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top