ಹೆಸರು  : ಶ್ರೀ ಕೆ. ಮಹದೇವ್ 

ತಂದೆಯ ಹೆಸರು  : ಲೇ|| ಕರಿಯಪ್ಪ 

ತಾಯಿಯ ಹೆಸರು : ಲೇ|| ಪದ್ಮಮ್ಮ 

ವಯಸ್ಸು   : 65 ವರ್ಷ (ಹುಟ್ಟಿದ ದಿನಾಂಕ: 11.05.1955) 

ಸ್ವಂತ ಸ್ಥಳ  : ಪಿರಿಯಾಪಟ್ಟಣ 

ಪತ್ನಿಯವರ ಹೆಸರು : ಶ್ರೀಮತಿ ಸುಭದ್ರಮ್ಮ 

ಮಕ್ಕಳು   : ಇಬ್ಬರು ಗಂಡು ಮಕ್ಕಳು 

ಮೊದಲನೆಯ ಮಗ  : ಶ್ರೀ ಪಿ.ಎಂ. ಪ್ರಸನ್ನ (ವಿವಾಹಿತರು) 

ಸೊಸೆ   : ಶ್ರೀಮತಿ ಅನಿತಾ 

ಮೊಮ್ಮಕ್ಕಳು  : ಮೊಮ್ಮಗ – ಪ್ರಥಮ್,    ಮೊಮ್ಮಗಳು-ಹಿರಣ್ಮಯಿ 

ಎರಡನೆಯ ಮಗ    : ಶ್ರೀ ಪಿ.ಎಂ. ಉಮೇಶ್ (ವಿವಾಹಿತರು) 

ಸೊಸೆ     : ಶ್ರೀಮತಿ ಪುನಿತಾ 

ಮೊಮ್ಮಕ್ಕಳು   : ಮೊಮ್ಮಗ – ಲಿಖಿತ್,  ಮೊಮ್ಮಗ – ವರ್ಷಿತ್

ವಿದ್ಯಾರ್ಹತೆ  : ಎಸ್.ಎಸ್.ಎಲ್.ಸಿ 

ಮನೆ ವಿಳಾಸ   : ಹೊನ್ನಸಿರಿ, ಪೋಸ್ಟ್ ಆಫೀಸ್ ರಸ್ತೆ,   ಪಿರಿಯಾಪಟ್ಟಣ 

ಕಚೇರಿ ವಿಳಾಸ (ಪಿರಿಯಾಪಟ್ಟಣ)    : ಶಾಸಕರ ಕಾರ್ಯಾಲಯ,  ತಾಲ್ಲೂಕು ಪಂಚಾಯ್ತಿ, ಕಾರ್ಯಾಲಯ  ಪಿರಿಯಾಪಟ್ಟಣ, ಮೈಸೂರು ಜಿಲ್ಲೆ 

ಕಚೇರಿ ವಿಳಾಸ (ಬೆಂಗಳೂರು)   : ಶಾಸಕರ ಭವನ-2,    ಕೊಠಡಿ ಸಂಖ್ಯೆ: 533 ಮತ್ತು 534  ವಿಧಾನಸೌಧ, ಬೆಂಗಳೂರು – 01 

ನನ್ನ ಬಾಲ್ಯ ಮತ್ತು ಇತಿಹಾಸ:

ಕರ್ನಾಟಕದ ಅತ್ಯಂತ ಹಿಂದುಳಿದ ಗ್ರಾಮ ಅಥವಾ ಪಟ್ಟಣಗಳಲ್ಲಿ ಒಂದಾದ ಪಿರಿಯಾಪಟ್ಟಣದಲ್ಲಿ ನಾನು ಯಾವುದೇ ರಾಜಕೀಯ ಗಂಧ-ಗಾಳಿಯ ಹಿನ್ನೆಲೆಯಿಲ್ಲದ ಸಾಮಾನ್ಯ ರೈತ ಕುಟುಂಬದಲ್ಲಿ ದಿನಾಂಕ: 11.05.1955ರಲ್ಲಿ ಜನಿಸಿದೆನು. ಶ್ರೀ ಕರಿಯಪ್ಪ ಮತ್ತು ಶ್ರೀಮತಿ ಪದ್ಮಮ್ಮನವರಿಗೆ ಜನಿಸಿದ್ದ ಐದು ಗಂಡು ಮಕ್ಕಳು ಮತ್ತು ಕೊನೆಯ ಒಬ್ಬ ಹೆಣ್ಣು ಮಗಳ ಪೈಕಿ ನಾನು ಹಿರಿಯ ಮಗನಾಗಿದ್ದೇನೆ. ನನ್ನದು ಒಕ್ಕಲಿಗ ಸಮುದಾಯದ ಬಡ ರೈತ ಕುಟುಂಬ. ಕೇವಲ ನಾಲ್ಕುವರೆ ಎಕರೆ ತರಿ ಜಮೀನು ಇವರ ಜೀವನ ನಿರ್ವಹಣೆಗೆ ಇದ್ದ ಆಸ್ತಿ.  ಜೀವನೋಪಾಯಕ್ಕೆ ಇದ್ದ ಆ ನಾಲ್ಕುವರೆ ಎಕರೆ ಜಮೀನಿನಲ್ಲಿ ಬರುತ್ತಿದ್ದ ಆದಾಯ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಮನೆಯ ಹಿರಿಯ ಮಗನಾಗಿದ್ದ ನನಗೆ ಕುಟುಂಬ ನಿರ್ವಹಣೆಗಾಗಿ ಕೃಷಿ ಚಟುವಟಿಕೆಯೊಂದಿಗೆ ಕೃಷಿಯೇತರ ಚಟುವಟಿಕೆಯನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಇಂಥಹ ಪರಿಸ್ಥಿತಿಯಲ್ಲಿ ನಾನು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾದ ಪಡಿತರ ವಿತರಣೆ ಚಟುವಟಿಕೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಇದರಿಂದ ನನ್ನ ಸಾರ್ವಜನಿಕ ಜೀವನದ ಸಂಪರ್ಕ ಹೆಚ್ಚಾಗತೊಡಗಿತು. ಮುಂದಿನ ದಿನಗಳಲ್ಲಿ ಇದು ವಿಸ್ತಾರವಾದಂತೆ ಸ್ಥಳೀಯ ರಾಜಕೀಯ ವ್ಯವಸ್ಥೆಯಲ್ಲಿ ನನಗೇ ಅರಿವಿಲ್ಲದಂತೆ ಸಕ್ರಿಯವಾಗತೊಡಗಿದೆ. ಇದು ನನ್ನ ರಾಜಕೀಯ ಜೀವನದ ಆರಂಭದ ಹೆಜ್ಜೆಯಾಗಿತ್ತು.          

ನನ್ನ ರಾಜಕೀಯ ಹಿನ್ನೆಲೆ ಮತ್ತು ಬೆಳೆದುಬಂದ ಹಾದಿ:

1983-84ರ ಕಾಲದಲ್ಲಿ ನಾನು ನನ್ನ ನೈಜ ಸ್ವಭಾವದಿಂದ ಸ್ಥಳೀಯವಾಗಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಕ್ರಿಯಾಶಿಲವಾಗಿದ್ದೆ. ಅದು ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯ ಸಂದರ್ಭ. ಸ್ಥಳೀಯರ ಒತ್ತಾಯದ ಮೇರೆಗೆ 1984ರಲ್ಲಿ ಮೊದಲ ಬಾರಿಗೆ ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷೇತರವಾಗಿ ಜೋಡಿ-ಹಕ್ಕಿ ಚಿನ್ಹೆಯಡಿ ಸ್ಪರ್ಧಿಸಿದೆ. ಆದರೆ, ಚುನಾವಣೆಯಲ್ಲಿ ನನಗೆ ಸೋಲಾಯಿತು. ಇದರಿಂದ ದೃತಿಗೆಡದ ನಾನು ನನ್ನ ಸ್ಥಳೀಯರ ಆತ್ಮ ಸ್ಥೈರ್ಯ ಮತ್ತು ಬೆಂಬಲಕ್ಕೆ ತಲೆಬಾಗಿ ಸೋಲನ್ನು ಸವಾಲಾಗಿ ಸ್ವೀಕರಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಸ್ಥಳೀಯರ ಬೆಂಬಲದ ಜೊತೆಗೆ ರಾಜಕೀಯ ಪಕ್ಷವೊಂದರ ನೆರವೂ ಅಗತ್ಯವೆಂದು ಅರಿತ ನಾನು 1989ರಲ್ಲಿ ಜನತಾ ಪಕ್ಷದ ಭ್ಯರ್ಥಿಯಾಗಿ ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ಪುನಃ ಸ್ಫರ್ಧಿಸಿದೆ. ಈ ಬಾರಿ ನನ್ನ ಜನತೆ ಕೈಬಿಡಲಿಲ್ಲ. ಮೊದಲಬಾರಿಗೆ ನಾನು ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾದೆ. ಇದು ರಾಜಕೀಯ ಜೀವನದಲ್ಲಿ ನನ್ನ ಯಶಸ್ಸಿನ ಮೊದಲ ಹೆಜ್ಜೆ. 

ನಂತರ 1994ರಲ್ಲಿ ಜನತಾದಳ ಪಕ್ಷದಿಂದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದೆ. ಅದೇ ವರ್ಷ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದೆ, ಆದರೆ ಅಲ್ಪ ಮತಗಳಿಂದ ನಾನು ಸೋಲಬೇಕಾಯಿತು. ಮುಂದೆ 1996ರಲ್ಲಿ ಪಿರಿಯಾಪಟ್ಟಣ ನಗರವು ಮಂಡಲ ಪಂಚಾಯ್ತಿಯಿಂದ ಟೌನ್ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿದಾಗ ನಡೆದ ಚುನಾವಣೆಯಲ್ಲಿ ನಾನು ಗೆದ್ದು ಅಧ್ಯಕ್ಷನಾದೆ. ನಾನು ಅಧ್ಯಕ್ಷನಾಗುವವರೆಗೆ ಶ್ರೀ ಸಾಮಾನ್ಯನ ಪಾಲಿಗೆ ಪಿರಿಯಾಪಟ್ಟಣ ಪಂಚಾಯ್ತಿ ಕಾರ್ಯಾಲಯವೊಂದು ದೂರದ ಬೆಟ್ಟ. ಅಧಿಕಾರ ವಿಕೇಂದ್ರೀಕರಣ ತತ್ವದಡಿಯಲ್ಲಿ ರೂಪುಗೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯ ದೂರು, ದುಮ್ಮಾನ, ಅಳಲು ಮತ್ತು ಆಸೆಗಳನ್ನು ಆಲಿಸಲು ಬದ್ಧವಾಗಿರಬೇಕಾಗಿದ್ದ ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ, ಮೇಲ್ದರ್ಜೆಗೆ ಏರಿ ಪರಿವರ್ತನೆಗೊಂಡ ನಂತರ ಸ್ಥಾಪನೆಯಾದ ಪಿರಿಯಾಪಟ್ಟಣ ಟೌನ್ ಪಂಚಾಯ್ತಿ ಕಾರ್ಯಾಲಯ ಸಾಮಾನ್ಯ ಜನರ ಪಾಲಿಗೆ ಮಿಲಿಟರಿ ಕ್ಯಾಂಪ್‌ನಂತೆ ಕಾಣುತ್ತಿತ್ತು ಆದರೆ ಒಳಗಡೆ ಮಾತ್ರ ಉಳ್ಳವರ ಪ್ರಭಾವಕ್ಕೆ ತಕ್ಕಂತೆ ವರ್ತಿಸುವ ಒಂದು ತಾಣ. ಈ ಸಂದರ್ಭದಲ್ಲಿ ನಾನು ಅಧ್ಯಕ್ಷನಾದ ನಂತರ ಟೌನ್ ಪಂಚಾಯ್ತಿಯಲ್ಲಿ ಜನಸಾಮಾನ್ಯರಿಗೆ ಮುಕ್ತವಾದ ವಾತಾವರಣ ಸೃಷ್ಟಿಯಾಯಿತು. 

ನಾನು ಪಿರಿಯಾಪಟ್ಟಣದಲ್ಲಿ ಅಧ್ಯಕ್ಷನಾದ ನಂತರ ಕೈಗೊಂಡ ಕೆಲಸ ಕಾರ್ಯಗಳು ಅನೇಕ. ಪಿರಿಯಾಪಟ್ಟಣದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿವೇಶನ ರಹಿತರು ಮತ್ತು ವಸತಿ ರಹಿತರಿಗೆ 1000 ನಿವೇಶನಗಳನ್ನು ಮತ್ತು 500 ವಸತಿಗಳನ್ನು ವಿತರಿಸಿದೆ. ಇದರ ಜೊತೆಗೆ ಪಿರಿಯಾಪಟ್ಟಣಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಕಾರ್ಯ, ಮಾರುಕಟ್ಟೆಯ ನಿರ್ಮಾಣ ಮುಂತಾದವುಗಳು ನನ್ನ ಅಧ್ಯಕ್ಷತೆಯ ಕಾಲದಲ್ಲಿ ಕೈಗೊಂಡ ಪ್ರಮುಖ ಕಾರ್ಯಗಳು. ಈ ಕಾರ್ಯಗಳು ಪಿರಿಯಾಪಟ್ಟಣ ನಗರದ ಜನಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ. ಮುಂದೆ ನನ್ನ ಅವಿರತ ಶ್ರಮ ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ನನ್ನ ಸಾಮಾನ್ಯ ನಡವಳಿಕೆಯಿಂದ ತಾಲ್ಲೂಕಿನ ಜನಸಾಮಾನ್ಯರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡೆ. ಪ್ರತಿಫಲವಾಗಿ ನಾನು 2006ರಲ್ಲಿ ಮೊದಲ ಬಾರಿಗೆ ತಾಲ್ಲೂಕಿನ ಜನತೆಯ ಅಪೇಕ್ಷೆ ಮತ್ತು ನನ್ನ ಹಿರಿಯರೂ, ಮಾರ್ಗದರ್ಶಕರೂ ಆದ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಆಶೀರ್ವಾದದಿಂದ ತಾಲ್ಲೂಕು ಜನತಾದಳದ ಅಧ್ಯಕ್ಷನಾಗಿ ಆಯ್ಕೆಯಾದೆ. 2008ರಲ್ಲಿ ಮೊದಲಬಾರಿಗೆ ಜ್ಯಾತ್ಯತೀತ ಜನತಾದಳ ಪಕ್ಷದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ರ್ಧಿಸಿದೆ.ಆದರೆ ಕೇವಲ 879 ಮತಗಳ ಅಂತರದಿಂದ ಸೋಲು ಕಂಡೆ. ಆದರೆ ಆ ವಿರೋಚಿತ ಸೋಲು ನನ್ನನ್ನು ವಿಚಲಿತನನ್ನಾಗಿ ಮಾಡಲಿಲ್ಲ. ಬದಲಿಗೆ ತಾಲ್ಲೂಕಿನಲ್ಲಿ ಮೊದಲಬಾರಿಗೆ ನನ್ನ ಶಕ್ತಿಯನ್ನು ಎದುರಾಳಿಗಳಿಗೆ ಪರಿಚಯ ಮಾಡಿಸಿತು. ಪರಿಣಾಮವಾಗಿ ತಾಲ್ಲೂಕಿನಲ್ಲಿ ನನ್ನ ನೇತೃತ್ವದಲ್ಲಿ ಮುಂದೆ 2008ರಿಂದ ನಡೆದ ಎಲ್ಲಾ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಟೌನ್ ಪಂಚಾಯ್ತಿ ಮತ್ತು ಸಹಕಾರ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಸಂಘಟಿಸಿ, ಗೆಲ್ಲಿಸುವ ಮೂಲಕ ಪಕ್ಷವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದ ಸಾರ್ಥಕತೆ ನನಗಿದೆ. 2004ರ ನಂತರ ರಾಜ್ಯ ರಾಜಕಾರಣದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಯಿಂದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಉಂಟಾಗಿದ್ದ ಜನತಾದಳದ ಪಕ್ಷದ ನಾಯಕತ್ವದ ಕೊರತೆಯನ್ನು ತುಂಬಿದ ಸಮಾಧಾನ ನನಗಿದೆ.  

ಮುಂದೆ, 2013ರ ವಿಧಾನಸಭಾ ಚುನಾವಣಾ ಸಂದರ್ಭ. ತಾಲ್ಲೂಕಿನಾದ್ಯಂತ ಜನತೆ ನನ್ನ ಮೇಲಿಟ್ಟ ವಿಶ‍್ವಾಸ, ತಾಲ್ಲೂಕಿನಲ್ಲಿ ನಾನು ಗೆದ್ದೇಬಿಟ್ಟೆ ಎಂಬಷ್ಟರ ಮಟ್ಟಿಗೆಉಂಟಾದ ವಾತಾವರಣದಲ್ಲಿ ವಿಧಿ ಮತ್ತೊಮ್ಮೆ ನನ್ನನ್ನು ‘ನೀನು ಇನ್ನುಷ್ಟು ದಿನ ಕಾಯಲೇಬೇಕು’ ಎಂದು ಪರೋಕ್ಷವಾಗಿ ಆದೇಶಿಸಿತ್ತು. ಚುನಾವಣೆಗೆ ಇನ್ನೆರಡು ದಿನ ಇದೆ ಎನ್ನುವ ವೇಳೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಸಣ್ಣಮೊಗೇಗೌಡರ ಅಕಾಲಿಕ ಮರಣ ನನ್ನ ಪಾಲಿಗೆ ಮತ್ತೊಮ್ಮೆ ಮಾರಕವಾಯಿತು. ಚುನಾವಣೆ ಸುಮಾರು ಇಪ್ಪತ್ತು ದಿನಗಳಷ್ಟು ಮುಂದೂಡಲ್ಪಟ್ಟಿತು. ಆದರೆ ರಾಜ್ಯದಲ್ಲಿ ಶ್ರೀ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ನಂತರ ನಡೆದ ಪಿರಿಯಾಪಟ್ಟಣ ಉಪ ಚುನಾವಣೆಯಲ್ಲಿ ಇಡೀ ರಾಜ್ಯ ಸರ್ಕಾರ ಬಂದು ತಾಲ್ಲೂಕಿನಲ್ಲಿ ಟಿಕಾಣಿ ಹೂಡಿತು. ಅಧಿಕಾರವಿದ್ದ ಪಕ್ಷಕ್ಕೆ ತಾಲ್ಲೂಕಿನ ಅನೇಕ ಮುಖಂಡರು ವಲಸೆ ಹೋದರು. ಆದರೆ ನಾನು ಯಾವಾಗಲೂ ನಂಬಿಕೊಂಡಿದ್ದ ಶ್ರೀ ಸಾಮಾನ್ಯ ಮತದಾರರು ಮಾತ್ರ ನನ್ನ ಜೊತೆಗೇ ಇದ್ದರು. ಚುನಾವಣೆ ಫಲಿತಾಂಶ ಬಂತು. ನಾನು ಕೇವಲ 2088 ಮತಗಳ ಅಂತರದಿಂದ ಮತ್ತೊಮ್ಮೆ ಸೋಲು ಕಾಣಬೇಕಾಯಿತು. ಸಣ್ಣಮೊಗೇಗೌಡರ ಅಕಾಲಿಕ ಮರಣ ಸಂಭವಿಸದಿದ್ದಲ್ಲಿ ಫಲಿತಾಂಶದ ದಿಕ್ಕೇ ಬದಲಾಗಿರುತ್ತಿತ್ತು ಎಂಬುದು ಇಂದಿಗೂ ತಾಲ್ಲೂಕಿನ ಬಹುತೇಕ ಶ್ರೀಸಾಮಾನ್ಯರ ಅಭಿಪ್ರಾಯ. ಆದರೆ, ಈ ಸೋಲು ನನಗಿಂತಲೂ ನನ್ನ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಹೆಚ್ಚು ಕಿಚ್ಚನ್ನು ಹೊತ್ತಿಸಿತು. ಮುಂದೆ ಬಂದ ಎಲ್ಲಾ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಟೌನ್ ಪಂಚಾಯ್ತಿ ಮತ್ತು ಸಹಕಾರ ಕ್ಷೇತ್ರಗಳ ಚುನಾವಣೆಯಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ಹಗಲು ರಾತ್ರಿಯೆನ್ನದೆ ದುಡಿದು ನನ್ನ ಪಕ್ಷವನ್ನು ಗೆಲ್ಲಿಸಿದರು.  

2018ರ ಚುನಾವಣೆಗೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದರು. 2018ರ ಚುನಾವಣೆ ಬಂದೇಬಿಟ್ಟಿತು. ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಆಡಳಿತ ಪಕ್ಷದಿಂದ ತಾಲ್ಲೂಕಿನಲ್ಲಿ ಉಂಟಾಗಿದ್ದ ಅನೇಕ ಬದಲಾವಣೆಗಳು ನನ್ನ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಯಾವುದೇ ಪರಿಣಾಮಗಳನ್ನು ಉಂಟು ಮಾಡಲಿಲ್ಲ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಂತು ಸೋಲುವ ಮೂಲಕ ದುಡಿದು ಕೂಡಿಟ್ಟ ಹಣವೆಲ್ಲ ಖಾಲಿಯಾಗಿ ಸಾಲದ ಹೊರೆ ಹೆಚ್ಚಾಗಿದ್ದರೂ ಕುಂದದ ನನ್ನ ಅಭಿಮಾನಿಗಳ ಮತ್ತು ಬೆಂಬಲಿಗರ ಉತ್ಸಾಹ ಹಾಗೂ ನನ್ನ ಮನೆಯವರ ಆತ್ಮ ವಿಶ್ವಸವನ್ನು ಹೆಚ್ಚುಮಾಡಿತ್ತು. ಕೊನೆಗೆ ದಿನಾಂಕ: 12.05.2018ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 7493ಮತಗಳ ಅಂತರದಿಂದ ಗೆಲ್ಲುವ ಮೂಲಕ 2008 ಮತ್ತು 2013ರ ಚುನಾವಣೆಯಲ್ಲಿನ ನನ್ನ ಸೋಲನ್ನು ಮರೆತು ಮೊದಲಬಾರಿಗೆ ವಿಧಾನಸಭಾ ಸದಸ್ಯರಾಗಿ ನಾನು ಆಯ್ಕೆಯಾದೆ.

ನನ್ನ ರಾಜಕೀಯ ಹೋರಾಟದ ಯುದ್ಧಭೂಮಿಯಲ್ಲಿ ನನಗೆ ನನ್ನ ಮಗನೇ ಸಾರಥಿ:

ನಾನು 2008ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಫರ್ಧಿಸುವ ವೇಳೆಗೆ ರಾಜಕೀಯವಾಗಿ ಬೆಳಕು ಕಂಡಿದ್ದ ಹಿರಿಯ ಮಗ ಶ್ರೀ ಪಿ ಎಂ ಪ್ರಸನ್ನ ನನಗೆ ಸಾರಥಿಯಂತೆ ನಿಂತಿದ್ದ. ತಾಲ್ಲೂಕಿನಲ್ಲಿ ನನಗೆ ಇದ್ದ ಅಪಾರ ಬೆಂಬಲ ಹಾಗೂ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರ ಮೇಲಿದ್ದ ಅಭಿಮಾನವನ್ನು ತಾಲ್ಲೂಕು ಜನತಾದಳದ ಯಶಸ್ಸನ್ನಾಗಿ ಪರಿವರ್ತಿಸುವಲ್ಲಿ ನನ್ನ ಪುತ್ರನ ಪಾತ್ರ ದೊಡ್ಡದು. ತಾಲ್ಲೂಕಿನ ಪಕ್ಷದ ಎಲ್ಲಾ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ 2008ರಿಂದ ಈ ವರೆವಿಗೂ ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳು, ದುಃಖದ ಸಂದರ್ಭಗಳು, ಕ್ರೀಡೆ, ಹಬ್ಬ, ಮನರಂಜನೆಯಂಥಾ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳು ನಡೆದಾಗ ಅವುಗಳಿಗೆ ಧನಸಹಾಯ ಹಾಗೂ ಸಂಬಂಧಪಟ್ಟವರ ಪಕ್ಕದಲ್ಲಿ ನಿಂತು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನನ್ನ ಮಗ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾನೆ. ತಾಲ್ಲೂಕಿನ ಎಲ್ಲಾ ಯುವಕರ ಮಾರ್ಗದರ್ಶಕನಾಗಿ ದುಡಿಯುವ ಮೂಲಕ ತಾಲ್ಲೂಕು ಯುವ ಪಡೆಯ ಪ್ರಶ್ನಾತೀತ ನಾಯಕನಂತೆ ಕಂಡಿದ್ದಾನೆ. ಇದರಿಂದ 2008 ಮತ್ತು 2013ರಲ್ಲಿ ನಾನು ಕೂದಲೆಳೆಯ ಅಂತರದಲ್ಲಿ ಸೂಲು ಕಂಡರೂ ನನ್ನ ಮತ್ತು ಪಕ್ಷದ ವರ್ಚಸ್ಸು ಕಿಂಚಿತ್ತೂ ಕುಂದದಂತೆ ನನ್ನ ಮಗ ಪಿ ಎಂ ಪ್ರಸನ್ನ ನೋಡಿಕೊಂಡಿದ್ದಾನೆ. ಇದು ನನ್ನ 2018ರ ಗೆಲುವಿನಲ್ಲೂ ಪ್ರತಿಬಿಂಬಿಸಿ ನಾನು ಅಮೋಘ ಗೆಲುವನ್ನು ಪಡೆಯಲು ಸಹಕಾರಿಯಾಯಿತು.

error: Content is protected !!
Scroll to Top