
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಮಸಣಿಕಮ್ಮ ಹಾಗೂ ಕನಂಬಡಿ ಅಮ್ಮನವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಮಾರ್ಚ್ 16ರ ಮಂಗಳವಾರ ಕನ್ನಂಬಾಡಿ ಅಮ್ಮನವರ ಜಾತ್ರೆ ಹಾಗೂ ಮಾರ್ಚ್ 18ರ ಗುರುವಾರ ಮಸಣಿಕಮ್ಮನವರ ಜಾತ್ರೆಯನ್ನು ನಡೆಸಲು ನಿಗದಿಯಾಗಿದ್ದು, ತಾಲೂಕಿನಲ್ಲಿ COVID ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ ಕಾರಣ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಜಾತ್ರೆ ಆಚರಿಸಲಾಗುವುದು ಎಂದರು. ಪ್ರತಿವರ್ಷ ಜಾತ್ರೆಗೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದ ಕಾರಣ ಇವರ ಜಾತ್ರೆ ಕುರಿತಂತೆ ಹೆಚ್ಚಿನ ಪ್ರಚಾರ ಮಾಡದಿರಲು ನಿರ್ಧರಿಸಲಾಗಿದೆ. ಇದರಿಂದಾಗಿ ಹೊರ ಜಿಲ್ಲೆಗಳಲ್ಲಿನ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಆದರೆ ಭಕ್ತರು ಕಡ್ಡಾಯವಾಗಿ COVID ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯ ಎಂದರು.

ಜಾತ್ರೆ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವಯಿಚ್ಛೆಯಿಂದ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕು. ಸರ್ಕಾರಿ ಕಚೇರಿಗಳಿಗೂ ಆಯಾ ಇಲಾಖೆ ಸಿಬ್ಬಂದಿ ದೀಪಾಲಂಕಾರ ಮಾಡಬೇಕು,ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು, ಯಾವುದೇ ಅವಘಡಗಳು ಸಂಭವಿಸದಂತೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗದಂತೆ ಪೊಲೀಸ್ ಸಿಬ್ಬಂದಿ ಸಿದ್ದರಾಗಿರಬೇಕು. ಜಾತ್ರೆ ನಡೆಯುವ ದೇವಾಲಯಗಳ ಸುತ್ತಲೂ ಹಾಗೂ ರಥೋತ್ಸವ ಸಾಗುವ ಮಾರ್ಗದಲ್ಲಿ ಯಾವುದೇ ಅಡ್ಡಿ-ಆತಂಕಗಳು ಎದುರಾಗದಂತೆ ಎಲ್ಲ ಇಲಾಖೆಯ ಸಿಬ್ಬಂದಿಗಳು ಜಾಗರೂಕರಾಗಿರುವಂತೆ ಸೂಚಿಸಿದರು.

ಸಭೆಯಲ್ಲಿ ಪುರಸಭಾಧ್ಯಕ್ಷ ಮಂಜುನಾಥ್ ಸಿಂಗ್, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ತಾಲೂಕು ಪಂಚಾಯಿತಿ ಇ.ಒ ಡಿ.ಸಿ ಶೃತಿ, ಸಿಪಿಐ ಪಿ ಜಗದೀಶ್, ಪುರಸಭಾ ಸದಸ್ಯರಾದ ಪಿಸಿ ಕೃಷ್ಣ, ಪಿಎಂ ವಿನೋದ್, ಮಂಜುಳಾ, ಲೋಕೋಪಯೋಗಿ ಇಲಾಖೆಯ AEE ಜಯಂತ್, ಜಿಲ್ಲಾಪಂಚಾಯಿತಿ AEE ಪ್ರಭು, ಮುಖಂಡರಾದ ಉಮೇಶ್, ಮುಶೀರ್ ಅಹಮದ್, ಪೆಪ್ಸಿ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.