ಪ್ರಾದೇಶಿಕ ಪಕ್ಷ ಉಳಿಯಲು ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ರವರ ಕನಸು ನನಸಾಗಿಸಲು ಇದೊಂದು ಬಾರಿ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಜಿ. ಟಿ. ದೇವೇಗೌಡ ತಿಳಿಸಿದರು.

ತಾಲೂಕಿನ ನವಿಲೂರು, ಹುಣಸವಾಡಿ, ಪುನಾಡಹಳ್ಳಿ, ಚಿಟ್ಟೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಮಲ್ಲಿನಾಥಪುರ- ಪುನಾಡಹಳ್ಳಿ ಗೇಟ್ ಬಳ್ಳಿಯಲ್ಲಿ  ಹಮ್ಮಿಕೊಂಡಿದ್ದ ಜೆಡಿಎಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 

 ರಾಷ್ಟ್ರೀಯ ಪಕ್ಷಗಳು  ಜನವಿರೋಧಿ ನೀತಿಯಿಂದ ಈಗಾಗಲೇ ಜನಸಾಮಾನ್ಯರ ಮನಸ್ಸಿನಿಂದ ದೂರವಾಗಿವೆ. ರಾಜ್ಯದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಮತದಾರರು ಕೂಡ ಜೆಡಿಎಸ್ ಪಕ್ಷವನ್ನು ಬಯಸುತ್ತಿದ್ದಾನೆ. ಪ್ರತಿ ಸಮುದಾಯಕ್ಕೂ ಕೂಡ ಮಾಜಿ ಪ್ರಧಾನಿ ದೇವೇಗೌಡ ರವರು ಮೀಸಲಾತಿಯನ್ನು ಕಲ್ಪಿಸಿ ಸ್ಥಳೀಯ ಚುನಾವಣೆಗಳಲ್ಲಿ ಅವಕಾಶವನ್ನು ನೀಡಿದ್ದಾರೆ. ರಾಜ್ಯಕ್ಕೆ ನೀರಾವರಿ ಕೊಡುಗೆಗಳು ಬಹಳಷ್ಟು ನೀಡಿದ್ದಾರೆ. ಸ್ಥಳೀಯವಾಗಿ ಹೊಗೆ ಸೊಪ್ಪು ವಿಚಾರವಾಗಿ ರೈತರು ಸಂಕಷ್ಟದಲ್ಲಿ ಇದ್ದಾಗ ಕೇಂದ್ರ ಸರ್ಕಾರದ ಗಮನ ಸೆಳೆದು ರೈತರ ಹಿತ ಕಾಯುವ ಕಾರ್ಯ ಮಾಡಿದ್ದಾರೆ. ಗ್ರಾಮ ವಾಸ್ತವ್ಯ, ಜನತಾದರ್ಶನ, ಹಳ್ಳಿಯಡೆಗೆ ಜಿಲ್ಲಾ ಅಧಿಕಾರಿಗಳ ನಡಿಗೆ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಸರ್ಕಾರ ಕಾರ್ಯ ನಿರ್ವಹಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೆಹಲಿಯಿಂದ ಬರುವ ಸೂಚನೆಗಳನ್ನು ಮಾತ್ರ ಪಾಲಿಸುತ್ತಾರೆ ಆದರೆ ಪ್ರಾದೇಶಿಕ ಪಕ್ಷಕ್ಕೆ ರಾಜ್ಯದ ಜನತೆಯೇ ನಿಜವಾದ ನಿರ್ಧಾರಕರಾಗಿದ್ದಾರೆ. ಬಂಗಾರಪ್ಪ, ಗುಂಡೂರಾವ್, ಯಡಿಯೂರಪ್ಪ ಸೇರಿದಂತೆ ಇನ್ನಿತರೆ ರಾಜಕೀಯ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿದರು ಆದರೆ ಜೆಡಿಎಸ್ ಪಕ್ಷ ಮಾತ್ರ ತನ್ನ ಸಿದ್ಧಾಂತದ ಮೂಲಕ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದಿದೆ. ಜೆಡಿಎಸ್ ಪಕ್ಷವು ಪಂಚರತ್ನ ಯಾತ್ರೆಯನ್ನು ಪ್ರಾರಂಭಿಸಿ ರಾಜ್ಯದಾದ್ಯಂತ ಅಭೂತಪೂರ್ವ ಬೆಂಬಲವನ್ನು ಸಂಪಾದಿಸಿ  ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಶತಸಿದ್ಧವಾಗಿದೆ.

 ತಾಲೂಕಿನ ಅಭಿವೃದ್ಧಿಗಾಗಿ ಶಾಸಕ ಕೆ. ಮಹದೇವ್ ಮತ್ತು ಮೈಮೂಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ರವರು ಡಬಲ್ ಇಂಜಿನ್ ಸರ್ಕಾರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಸಚಿವರ ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಪ್ರತಿನಿತ್ಯ ಅಲೆದಾಡಿ ಅನುದಾನವನ್ನು ತಂದಿದ್ದಾರೆ ಇದನ್ನು ತಾಲೂಕಿನ ಜನತೆ ಮರೆಯಬಾರದು. ಶಾಸಕ ಕೆ.ಮಹದೇವ್ ರವರನ್ನು ಮತ್ತೊಮ್ಮೆ ತಾಲೂಕಿನ ಶಾಸಕರಾಗಿ ಆಯ್ಕೆ ಮಾಡಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ನಡೆಸಲು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

 ಶಾಸಕ ಕೆ.ಮಹದೇವ್ ಮಾತನಾಡಿ ತಾಲೂಕಿನ ಅಭಿವೃದ್ಧಿಗೆ ನನ್ನ ಶ್ರಮಕ್ಕೂ ಮೀರಿ ಶ್ರಮಿಸುತ್ತಿದ್ದೇನೆ. ಕಾರ್ಯಕರ್ತರ ಮತ್ತು ಪಕ್ಷದ ಉಳಿವಿಗಾಗಿ ನನ್ನ ಕುಟುಂಬ ಅವಿರತ ಶ್ರಮಿಸುತ್ತಿದೆ. ಬಡ ಕುಟುಂಬದಲ್ಲಿ ಬಂದಿರುವ ನನಗೆ ಶಾಸಕನಾಗಿ ಕೆಲಸ ಮಾಡಲು ತಾವು ಆಶೀರ್ವಾದ ಮಾಡಿದ್ದೀರಿ. ನಿಮಗೆ ನೀಡಿದ ಭರವಸೆಗಳನ್ನು ಸಾಧ್ಯವಾದಷ್ಟು ಈಡೇರಿಸಿದ್ದೇನೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನನಗೆ ಮತ ನೀಡಿ ತಾಲೂಕಿನ ಸೇವೆ ಮಾಡಲು ಕಾರ್ಯಕರ್ತರು ಜನತೆ ಸಹಕರಿಸಬೇಕು ಎಂದರು.

 ಮೈ ಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ ತಾಲೂಕಿನ ಜನತೆಯ ಸಂಕಷ್ಟಗಳಿಗೆ ಪ್ರತಿನಿತ್ಯ ಶಾಸಕರು ಮತ್ತು ನಾನು ಸ್ಪಂದಿಸುತಿದ್ದೇವೆ. ಮಾಜಿ ಶಾಸಕ ಕೆ. ವೆಂಕಟೇಶ್ ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲೇ ಇದ್ದು ಇತ್ತೀಚೆಗೆ ರಾಜಕೀಯ ಕಾರಣಕ್ಕಾಗಿ ತಾಲೂಕಿನಲ್ಲಿ ಸಂಚಾರ ಬೆಳೆಸಿದ್ದಾರೆ, ನಮ್ಮ ಆರ್ಥಿಕ ವಹಿವಾಟಿನ ಬಗ್ಗೆ ಪ್ರಶ್ನಿಸುವ ಅವರು ತಮ್ಮ ಆರ್ಥಿಕ ಚಟುವಟಿಕೆಯ ಬಗ್ಗೆ ಜನಸಾಮಾನ್ಯರಿಗೆ ಬಹಿರಂಗ ಪಡಿಸಬೇಕು. ನಮ್ಮ ಕುಟುಂಬವು ಎಂದಿಗೂ ಜನರಿಗೆ ಮೋಸ ಮಾಡುವ ಮತ್ತು ಲೂಟಿ ಮಾಡಿ ಹಣ ಸಂಪಾದಿಸುವ ಅವಶ್ಯಕತೆ ಇಲ್ಲ. ಬಡ ಕುಟುಂಬದಲ್ಲಿ ಬಂದಿರುವ ನಾವು ಶ್ರಮಪಟ್ಟು ಆರ್ಥಿಕ ಸದೃಢತೆ ಹೊಂದುತ್ತಾ ತಾಲೂಕಿನ ಜನತೆಯ ಸೇವೆ ಮಾಡುತ್ತಿದ್ದೇವೆ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಮ್ಮ ಹಿರಿತನಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಎಚ್ಚರಿಸಿದರು.

 ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಸದಸ್ಯ ರಘುನಾಥ್, ಐಲಾಪುರ ರಾಮು, ಮಲ್ಲಿಕಾರ್ಜುನ, ರಂಗಸ್ವಾಮಿ, ಪುರಸಭೆ ಅಧ್ಯಕ್ಷ ಕೆ. ಮಹೇಶ್, ಮೈಮುಲ್ ಜಿಲ್ಲಾ ನಿರ್ದೇಶಕ ಎಚ್.ಡಿ.  ರಾಜೇಂದ್ರ, ಟಿ ಎ ಪಿ ಸಿ ಎಂ ಎಸ್ ಉಪಾಧ್ಯಕ್ಷ ಜಲೇಂದ್ರ,ಸದಸ್ಯೆ ಸುನೀತಾ,ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ,ಗ್ರಾ ಪಂ ಸದಸ್ಯ ಚೆಲುವರಾಜ್,ಮುಖಂಡರಾದ ಅಶೋಕ್ ಪುನಾಡಹಳ್ಳಿ, ಪ್ರೀತಿ ಅರಸ್, ಮಂಜುಳಾ, ಗೌರಮ್ಮ, ಹೊನ್ನೇನಹಳ್ಳಿ ಲೋಕೇಶ್, ಕುಮಾರ್ ಬೇಗೂರು, ಯತೀರಾಜ್ ಸೇರಿದಂತ್ತೆ ಮತಿತ್ತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top